ಕಲಬುರಗಿ: ಸೈನಿಕರೊಬ್ಬರ ಸೋಂಕಿತ ತಾಯಿಗೆ ಕೊನೆಗೂ ಆಕ್ಸಿಜನ್ ಸಿಕ್ಕಿದೆ.
ಕಲಬುರಗಿ ತಾಲೂಕಿನ ಪಾಣೆಗಾಂವ್ ಗ್ರಾಮದ ಸಂಜೀವ್ ರಾಠೋಡ್ ಅವರ 65 ವರ್ಷದ ತಾಯಿಗೆ ಕಳೆದ ನಾಲ್ಕು ದಿನಗಳ ಹಿಂದೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಬಳಿಕ ಅವರು ಪಾಣೆಗಾಂವ್ ಮನೆಯಲ್ಲಿಯೇ ಹೋಂ ಐಸೋಲೇಟ್ ಆಗಿದ್ದರು. ಇಂದು ಅವರು ಸ್ಯಾಚುರೇಷನ್ ಕಡಿಮೆಯಾಗಿ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸೈನಿಕ ಸಂಜೀವ್ ಅವರು ಅಸಹಾಯಕತೆಯಿಂದ ಕಾಶ್ಮೀರದಿಂದಲೇ ಆಕ್ಸಿಜನ್ ಗಾಗಿ ಮನವಿ ಮಾಡುತ್ತಾ ಕಣ್ಣೀರು ಹಾಕಿದ್ದರು.
ನನ್ನ ತಾಯಿಗೆ ಆಕ್ಸಿಜನ್ ಕೊಡಿಸಿ ಅಂತ ಕಲಬುರಗಿಯ ಪಾಣೆಗಾಂವ್ ಮೂಲದ ಸಿಆರ್‍ಪಿಎಫ್ ಯೋಧ ಸಂಜೀವ್ ರಾಥೋಡ್ ಫೇಸ್‍ಬುಕ್ ಲೈವ್‍ನಲ್ಲಿ ಕಣ್ಣೀರಿನ ಮನವಿ ಮಾಡಿಕೊಂಡಿದ್ರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಪಬ್ಲಿಕ್ ಟಿವಿಯಲ್ಲಿಂದು ಸಂಜೆ 5 ಗಂಟೆಗೆ ಸುದ್ದಿ ಪ್ರಸಾರ ಮಾಡಲಾಗಿತ್ತು. ಪಬ್ಲಿಕ್ ಟಿವಿ ವರದಿ ಬಳಿಕ ಕಲಬುರಗಿ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ, ಯೋಧನ ತಾಯಿ ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಈ ಸಂಬಂಧ ಮತ್ತೊಂದು ವೀಡಿಯೋ ಮಾಡಿರುವ ಸಂಜೀವ್, ನಾನು ಸೀಶಿಯಲ್ ಮೀಡಿಯಾದಲ್ಲಿ ವೀಡಿಯೋ ಹಾಕಿದ್ದೆ. ನಮ್ಮ ತಾಯಿಯವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ನನ್ನ ವೀಡಿಯೋ ನೋಡಿ ಪಬ್ಲಿಕ್ ಟಿವಿಯವರು ಸ್ಪಂದಿಸಿದರು. ಅಲ್ಲದೆ ಕಲಬುರಗಿ ಡಿಸಿ ಜ್ಯೋತ್ಸ್ನಾ ಅವರು ತಕ್ಷಣ ಮೆಡಿಕಲ್ ಟೀಂ ಕಳುಹಿಸಿ ತಾಯಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೀಗಾಗಿ ಪಬ್ಲಿಕ್ ಟಿವಿ ಹಾಗೂ ಡಿಸಿಗೆ ಹೃದಯಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.