ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಗ್ರಾಮದ ಡೊಂಗ್ರಿ ಗ್ರಾಮದ ಮಕ್ಕಳು ತೂಗು ಸೇತುವೆ ಎರಡು ವರ್ಷದ ಹಿಂದೆ ಪ್ರವಾದಲ್ಲಿ ಕೊಚ್ವಿಹೋಗಿದ್ದರಿಂದ ಗಂಗಾವಳಿ ನದಿ ನೀರಿನಲ್ಲಿ ಜೀವ ಕೈಯಲ್ಲಿ ಹಿಡಿದು ಪ್ರತಿ ದಿನ ಶಾಲೆ ಹಾಗೂ ಕಾಲೇಜಿಗೆ ತೆರಳಬೇಕಿತ್ತು. ಈ ಕುರಿತು ಪಬ್ಲಿಕ್ ಟಿವಿ ತುಂಬಿ ಹರಿಯುವ ನದಿಯಲ್ಲಿ ಸಾವಿನ ಸಂಚಾರ ಎಂಬ ಶೀರ್ಷಿಕೆ ಅಡಿ ವರದಿ ಪ್ರಸಾರ ಮಾಡಿತ್ತು.
ಡೊಂಗ್ರಿ ಗ್ರಾಮಕ್ಕೆ ಹೋಗಬೇಕು ಎಂದರೆ ಯಲ್ಲಾಪುರ ಭಾಗದಿಂದ ಸುತ್ತುವರೆದು 20ಕಿ.ಮೀಟರ್ ಬಸ್ ಸಂಚಾರ ಮಾಡಬೇಕಿತ್ತು. ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದಿದ್ದರಿಂದ ಡೊಂಗ್ರಿ ಗ್ರಾಮದ ಮಕ್ಕಳು ಶಾಲೆ ಕಾಲೇಜಿಗೆ ತೆರಳಲು ಹರಿಯುತ್ತಿರುವ ನದಿಯಲ್ಲಿ ಬಿದಿರಿನ ಬೊಂಬಿನಿಂದ ನಿರ್ಮಾಣವಾದ ತೆಪ್ಪದಲ್ಲಿ ಸಾಗುತ್ತಿದ್ದರು. ಸ್ಪಲ್ಪ ಆಯ ತಪ್ಪಿದ್ದರೂ ನೀರಿನಲ್ಲಿ ಬಿದ್ದು ಜೀವ ಕಳೆದುಕೊಳ್ಳುವ ಸ್ಥಿತಿ ಅಲ್ಲಿತ್ತು. ಈ ಕುರಿತು ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು.
ವರದಿ ನಂತರ ಅಂಕೋಲ ತಾಲೂಕಿನ ತಹಶೀಲ್ದಾರ್ ಭೇಟಿ ನೀಡಿ ಗ್ರಾಮದವರಿಗೆ ಹೆದರಿಸಿ ಮಾಧ್ಯಮಗಳಿಗೆ ಹೋದರೆ ನೋಟೀಸ್ ನೀಡುವ ಬೆದರಿಕೆ ಸಹ ಹಾಕಿದ್ದರು. ಈ ಕುರಿತು ಗ್ರಾಮಸ್ಥರು ತಮ್ಮ ನೋವನ್ನು ಹಂಚಿಕೊಂಡಿದ್ದರು. ತಕ್ಷಣ ಅಧಿಕಾರಿಗಳ ನಡವಳಿಕೆ ಹಾಗೂ ಗ್ರಾಮದ ನೈಜ ಸಮಸ್ಯೆ ಬಗ್ಗೆ ಇಲ್ಲಿನ ಶಾಸಕ ರೂಪಾಲಿ ನಾಯ್ಕ ಅವರ ಗಮನಕ್ಕೆ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ಇದಕ್ಕೆ ಸ್ಪಂದಿಸಿದ ಶಾಸಕಿ ರೂಪಾಲಿ ನಾಯ್ಕ ಅವರು ತೂಗು ಸೇತುವೆ ನಿರ್ಮಾಣ ಮಾಡಲು ಎರಡು ಕೋಟಿ ತುರ್ತು ಮಂಜೂರಿಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಜೊತೆಗೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಮಕ್ಕಳಿಗೆ ಶಾಲೆಗೆ ತೆರಳಲು ನಿನ್ನೆಯಿಂದ ಬಸ್ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ಜೀವ ಕೈಯಲ್ಲಿ ಹಿಡಿದು ಶಾಲೆಗೆ ತೆರಳುತಿದ್ದ ಮಕ್ಕಳಿಗೆ ಸದ್ಯ ಬಿಗ್ ರಿಲೀಫ್ ಸಿಕ್ಕಿದೆ. ಇನ್ನು ತಮ್ಮೂರಿನ ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದಕ್ಕಾಗಿ ಹಾಗೂ ವರದಿ ಮಾಡಿ ಆಡಳಿತದ ಕಣ್ಣು ತೆರೆಯುವಂತೆ ಮಾಡಿದ ಪಬ್ಲಿಕ್ ಟಿವಿ ಗೆ ಗ್ರಾಮದವರು ಧನ್ಯವಾದ ಅರ್ಪಿಸಿದ್ದಾರೆ.