ನ್ಯೂಸ್ ಅನ್ನೋದು ಮುಂಚೆ ಕೆಲವರ ಆಸಕ್ತಿಗೆ ಮಾತ್ರ ಸೀಮಿತವಾಗಿತ್ತು. ಆದ್ರೀಗ ಸುದ್ದಿ ಪ್ರಪಂಚ, ಎಲ್ಲರ ಅಗತ್ಯವಸ್ತು. ನಿಷ್ಪಕ್ಷಪಾತ ಸುದ್ದಿ ಬಿತ್ತರ, ವಸ್ತುನಿಷ್ಠ ವಿಶ್ಲೇಷಣೆ, ಮತ್ತು ಸ್ಪಷ್ಟ ಮಾಹಿತಿ ಕೊಡೋದು ಸವಾಲಿನ ಕೆಲಸ. ಇಂಥ ಸವಾಲಿನ ಮಧ್ಯೆ ಯಾವುದೇ ಪೂರ್ವಾಗ್ರಹವಿಲ್ಲದೆ, ಆಮಿಷ, ಒತ್ತಡಗಳಿಗೆ ಜಗ್ಗದೆ, ಯಾವ ರಾಜಕೀಯ ಪಕ್ಷವನ್ನು ಪ್ರತಿನಿಧಿಸದೆ, ನೊಂದವರಿಗೆ ನೆರವಾಗಿ, ಅನ್ಯಾಯವನ್ನು ಖಂಡಿಸಿ ಸುದ್ದಿ ಬಿತ್ತರಿಸೋ ಚಾನೆಲ್‍ನ ಅನಿವಾರ್ಯತೆ ಕನ್ನಡಿಗರಿಗಿದ್ದರೆ, ಅದನ್ನು ಪರಿಪೂರ್ಣವಾಗಿ ಈಡೇರಿಸಿದ್ದು ನಿಮ್ಮ ಪಬ್ಲಿಕ್ ಟಿವಿ.
‘ಯಾರ ಆಸ್ತಿಯೂ ಅಲ್ಲ ಇದು ನಿಮ್ಮ ಟಿವಿ’ ಎಂಬ ಘೋಷ ವಾಕ್ಯದೊಂದಿಗೆ ಫೆಬ್ರವರಿ 12 , 2012ರಂದು ಲೋಕಾರ್ಪಣೆಗೊಂಡ ನಿಮ್ಮ ಪಬ್ಲಿಕ್ ಟಿವಿಗೆ ಇಂದು ಒಂಬತ್ತನೇ ವಾರ್ಷಿಕೋತ್ಸವ ಸಂಭ್ರಮ.
ನಿಖರ ಮತ್ತು ಪ್ರಖರ ಸುದ್ದಿಯನ್ನು ನೋಡಲು, ಪುಟ್ಟ ಟಿವಿ ಪರದೆ ಮುಂದೆ ಕೂರುವ ಈಗಿನ ವೀಕ್ಷಕರು ದಡ್ಡರಲ್ಲ. ಚಾನೆಲ್ ಹಾಕಿ ಕುಳಿತ ಜನ ಸುದ್ದಿಯ ಗುಣಮಟ್ಟವನ್ನು ಅಳೆಯುವಲ್ಲಿ ಚಾಣಾಕ್ಷರು. ಅಂತಹ ಕೋಟ್ಯಂತರ ಪ್ರಜ್ಞಾವಂತರ ಅಚ್ಚುಮೆಚ್ಚಿನ ಚಾನೆಲ್ಲಾಗಿ ಹೊರಹೊಮ್ಮಿದ ಹಾದಿ, ಪಬ್ಲಿಕ್ ಟಿವಿ ಪಾಲಿಗೆ ಸುಲಭದ್ದಾಗಿರಲಿಲ್ಲ. ಆ ಕಠಿಣ ಲಕ್ಷ್ಯವನ್ನು ತಲುಪಿಯೇ ಸಿದ್ಧ ಅಂತ ನಿರ್ಧರಿಸಿದ್ದು ಪಬ್ಲಿಕ್ ಟಿವಿಯ ಕ್ಯಾಪ್ಟನ್ ಹೆಚ್.ಆರ್.ರಂಗನಾಥ್.
ಇನ್ನು ಟಿ.ಆರ್.ಪಿ ಸಮರದಲ್ಲಿ ಬೇರುಮಟ್ಟದಿಂದ ಶುರುಮಾಡಿ ಅಲ್ಪಕಾಲದಲ್ಲೇ ಕನ್ನಡಿಗರ ಮನೆ ಮನ ಎರಡರ ಮೇಲೂ ಆಧಿಪತ್ಯ ಸ್ಥಾಪಿಸಿದ ಹೆಮ್ಮೆ ನಮ್ಮದು. ಅದಕ್ಕೆ ಕಾರಣ ಇಲ್ಲದಿಲ್ಲ. ದಿನನಿತ್ಯದ ಆಗುಹೋಗುಗಳನ್ನು ಕಾಟಾಚಾರದ ಸುದ್ದಿಯಾಗಿಸದೆ ಸಮಾಚಾರಕ್ಕೊಂದು ಸದಾಚಾರದ ಚೌಕಟ್ಟು ಹಾಕಿ, ವೃತ್ತಾಂತಕ್ಕೆ ವೃತ್ತಿಪರತೆಯ ವಿಶ್ಲೇಷಣೆ ನೀಡುವುದು ಪಬ್ಲಿಕ್ ಟಿವಿಯ ಸತ್ವ ಹಾಗೂ ತತ್ವ.
ಸಮಾಜಕ್ಕೆ ಸತ್ಯ, ಸ್ಪಷ್ಟ, ಸದುದ್ದೇಶಭರಿತ ಕಾರ್ಯಕ್ರಮಗಳನ್ನು ಕೊಡೋದ್ರಲ್ಲಿ ಪಬ್ಲಿಕ್ ಟಿವಿಗೆ ಸಾಟಿ ಮತ್ತೊಂದಿಲ್ಲ. ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್, ಕನ್ನಡ ಸುದ್ದಿವಾಹಿನಿ ಇತಿಹಾಸದಲ್ಲೇ ಹೊಸ ಮೈಲಿಗಲ್ಲು. ಎಚ್.ಆರ್.ರಂಗನಾಥ್ ಸಾರಥ್ಯದ ಬಿಗ್ ಬುಲೆಟಿನ್ ಇಂದು ಕರ್ನಾಟಕದ ಮನೆ ಮಾತು.
ಇನ್ನು ಕೊರೊನಾ ಲಾಕ್ ಡೌನ್ ಸಮಯದಲ್ಲಿ ಹೆಚ್.ಆರ್. ರಂಗನಾಥ್ ನಡೆಸಿಕೊಟ್ಟ ಮನೆಯೇ ಮಂತ್ರಾಲಯ ಅದೆಷ್ಟೋ ಬಳಲಿದ ಮನಗಳಿಗೆ ಸಾಂತ್ವನ ಹೇಳಿದ ಸಾರ್ಥಕ ಕಾರ್ಯಕ್ರಮ. ನೊಂದವರ ಕಣ್ಣೀರನ್ನು ಒರೆಸೋದಷ್ಟೇ ಅಲ್ಲ, ಅವರಿಗೆ ವಾಸ್ತವದಲ್ಲಿ ನೆರವಾಗುವ ನೆಂಟನ ಪಾತ್ರ ವಹಿಸಿದ ಅರ್ಥಪೂರ್ಣ ಕಾರ್ಯಕ್ರಮವಿದು.
ಪಬ್ಲಿಕ್ ಟಿವಿಯ ಮತ್ತೊಂದು ಸಮಾಜಮುಖಿ ಕಾರ್ಯಕ್ರಮ ಅಂದರೆ ಅದು ಜ್ಞಾನದೀವಿಗೆ. ಹೌದು ಕೊರೊಮಾ ಹೆಮ್ಮಾರಿಯ ಹೊಡೆತದಿಂದಾಗಿ ಗ್ರಾಮೀಣ ಭಾಗದ ಎಸ್‍ಎಸ್‍ಎಲ್‍ಸಿ ಮಕ್ಕಳು ಆನ್ ಲೈನ್ ಪಾಠದಿಂದ ವಂಚಿತರಾಗುತ್ತಿರುವುದನ್ನು ತಡೆಯಲು ಪರಿಹಾರ ರೂಪದಲ್ಲಿ ಹುಟ್ಟಿಕೊಂಡ ಮಹಾ ಅಭಿಯಾನವೇ ಜ್ಞಾನ ದೀವಿಗೆ.
ಸರ್ಕಾರಿ ಶಾಲೆಯ 10ನೇ ತರಗತಿ ಮಕ್ಕಳ ಸಮಸ್ಯೆ ಅರಿತ ನಿಮ್ಮ ಪಬ್ಲಿಕ್ ಟಿವಿ., ರೋಟರಿ ಸಂಸ್ಥೆಯ ಸಹಯೋಗದಲ್ಲಿ ಮಹಾಯಜ್ಞಕ್ಕೆ ಮುನ್ನುಡಿ ಬರೆಯಿತು. `ಜ್ಞಾನ ದೀವಿಗೆ’ ಹೆಸರಿನಲ್ಲಿ ಈ ಮಹಾ ಅಭಿಯಾನ ಯಶಸ್ವಿಯಾಗಿ ಸಾಗಿದೆ. ಮಹಾದಾನಿಗಳ ನೆರವಿಂದ ಸಹಸ್ರಾರು ವಿದ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ.
ಕಳೆದ 9 ವರ್ಷಗಳಲ್ಲಿ ಇಂಥ ಹತ್ತು ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಪಬ್ಲಿಕ್ ಟಿವಿ ಯಶಸ್ವಿಯಾಗಿ ಪ್ರಸಾರ ಮಾಡಿದೆ. ತನ್ಮೂಲಕ ವೀಕ್ಷಕ ಪ್ರಭುಗಳ ಹೃದಯವನ್ನೂ ಗೆದ್ದಿದೆ. ಸುದ್ದಿ ವಲಯದಲ್ಲಿ ಗೆದ್ದು ಬೀಗಿ ಲೋಕಪ್ರಸಿದ್ಧವಾಗಲು ಸಹಕರಿಸಿದ ಕನ್ನಡಿಗರಿಗೆ ಪಬ್ಲಿಕ್ ಟಿವಿ ಕೊಟ್ಟ ಮತ್ತೆರಡು ಉಡುಗೊರೆ ಅಂದ್ರೆ ಅದು ಪಬ್ಲಿಕ್ ಮ್ಯೂಸಿಕ್ ಹಾಗೂ ಪಬ್ಲಿಕ್ ಮೂವೀಸ್. ಕನ್ನಡಿಗರ ನೆಚ್ಚಿನ ಸಿನಿಮಾ ವಾಹಿನಿ ಪಬ್ಲಿಕ್ ಮೂವೀಸ್ ಗೆ ಇಂದು ಮೂರನೇ ವರ್ಷದ ಹುಟ್ಟುಹಬ್ಬ.
9 ವರ್ಷಗಳ ಕಾಲ ಸಕಲ ಪರಿಸ್ಥಿತಿಗಳಲ್ಲೂ, ಪಬ್ಲಿಕ್ ಟಿವಿಯ ಪಥಕ್ಕೆ ಪಥವಿಟ್ಟು ನಡೆದ ಕನ್ನಡಿಗರು, 10ನೇ ವರ್ಷದ ಪಯಣದಲ್ಲೂ ಮನಃಪೂರ್ವಕವಾಗಿ ಹಾರೈಸುತ್ತಾ ಜೊತೆಗಿರುವಿರೆಂದು ನಾವು ಭಾವಿಸುತ್ತೇವೆ. ನಮ್ಮ ಅನ್ನದಾತರಾದ ನಿಮ್ಮ ಪ್ರೀತಿ ಸಹಕಾರ ಹೀಗೇ ಮುಂದುವರಿಯಲಿ ಅಂತ ವಿನಮ್ರವಾಗಿ ಪ್ರಾರ್ಥಿಸುತ್ತೇವೆ. ಧನ್ಯವಾದ ಕರ್ನಾಟಕ