ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆಶೀರ್ವಾದವನ್ನು ಸಿಎಂ ಬೊಮ್ಮಾಯಿ ಪಡೆದರು.
ಇಂದು ಮಧ್ಯಾಹ್ನ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಬೊಮ್ಮಾಯಿ ಆಗಮಿಸಿದರು. ತಂದೆಯ ನಿವಾಸಕ್ಕೆ ಬರುತ್ತಿದ್ದಂತೆ ರೇವಣ್ಣ ಅವರು ಬೊಮ್ಮಾಯಿ ಅವರನ್ನು ಸ್ವಾಗತಿಸಿದರು.
ಎಚ್‍ಡಿ ದೇವೇಗೌಡರಿಗೆ ನಮಸ್ಕರಿಸಿ ಬೊಮ್ಮಾಯಿ ಆಶೀರ್ವಾದ ಪಡೆದರು. ಈ ವೇಳೆ ದೇವೇಗೌಡರು ಬೊಮ್ಮಾಯಿ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು.
ಈ ವೇಳೆ ಮಾತನಾಡಿದ ಬೊಮ್ಮಾಯಿ, ಇಂದು ದೇವೇಗೌಡರನ್ನು ಭೇಟಿ ಮಾಡಿ ಆಶೀರ್ವಾದ ತೆಗೆದುಕೊಂಡೆ. ಈ ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿ, ಇರುವ ಸಮಸ್ಯೆ ಬಗೆಹರಿಸಿ ಎಂದಿದ್ದಾರೆ. ರಾಜ್ಯದ ಸಮಸ್ಯೆ ಬಂದಾಗ ನನ್ನ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ. ಅವರು ರಾಜ್ಯ ಎಂಬ ವಿಚಾರ ಬಂದಾಗ ಯಾವಾಗಲು ಇದ್ದಾರೆ ಈಗಲೂ ಇರುತ್ತಾರೆ ಎಂದು ತಿಳಿಸಿದರು.
ರಾಜ್ಯದ ವಿಚಾರ ನೆಲ ಜಲ ವಿಚಾರಗಳ ಬಗ್ಗೆಯೂ ಮಾತನಾಡಿದ್ದೇನೆ. ನೀರಾವರಿ ವಿಚಾರವಾಗಿ ಪ್ರತಿಭಟನೆ ಎಲ್ಲವೂ ಗೊತ್ತಿದೆ. ನೆಲ, ಜಲ ವಿಚಾರ ಬಂದಾಗ ನಾವೆಲ್ಲಾ ಒಂದೇ ಎಂದರು.
ಚೆನ್ನಮ್ಮ ಅವರನ್ನು ಭೇಟಿಯಾಗಿ ಆಶಿರ್ವಾದ ಪಡೆದುಕೊಂಡೆ. ದೇವೇಗೌಡರು ಬಹಳ ಖುಷಿಪಟ್ಟರು. ನನಗೂ ಇಲ್ಲಿಗೆ ಬಂದ ಮೇಲೆ ಬಹಳ ಖುಷಿ ಆಯ್ತು. ನನ್ನ ತಂದೆ ಎಸ್.ಆರ್.ಬೊಮ್ಮಾಯಿ ಜೊತೆ ದೇವೇಗೌಡರು ಒಡನಾಟ ಹೊಂದಿದ್ದರು. ನಾನು ಆಶೀರ್ವಾದ ಮಾರ್ಗದರ್ಶನ ಪಡೆದಿದ್ದೇನೆ. ದೇವೇಗೌಡರು ಅನೇಕ ಸಂಗತಿಗಳನ್ನು ಮೆಲುಕು ಹಾಕಿದ್ದಾರೆ ಎಂದು ತಿಳಿಸಿದರು.