ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ತಡವಾದರೆ, ಮುಂದಿನ ಸೆಮಿಸ್ಟರ್ ಆನ್‍ಲೈನ್ ಬೋಧನೆ ಮುಂದುವರಿಕೆ: ಅಶ್ವಥ್ ನಾರಾಯಣ್

Public TV
2 Min Read
Ashwath 1

– ಕೊರೊನಾ ಪರಿಸ್ಥಿತಿ ನೋಡಿಕೊಂಡು ಪರೀಕ್ಷೆ, ಭೌತಿಕ ತರಗತಿ ಕುರಿತು ನಿರ್ಧಾರ

ಬೆಂಗಳೂರು: ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಕಾಲೇಜುಗಳು ಪದವಿ ಕೋರ್ಸ್‍ಗಳ ಸಮ ಸ್ಥಾನಿಕ ಸೆಮಿಸ್ಟರ್ ಕೋರ್ಸ್‍ಗಳಿಗೆ ಆನ್‍ಲೈನ್ ತರಗತಿಗಳನ್ನು ಮುಂದುವರಿಸಬೇಕು. ಭೌತಿಕ ತರಗತಿಗಳನ್ನು ಆರಂಭಿಸುವ ಕುರಿತು ಕೋವಿಡ್ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ತಿಳಿಸಿದರು.

ಬೆಸ ಸ್ಥಾನಿಕ ಸೆಮಿಸ್ಟರ್‍ಗಳಿಗೆ ಪರೀಕ್ಷೆಗಳನ್ನು ಇನ್ನೂ ಪೂರೈಸದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಕೂಡ ಸಮ ಸ್ಥಾನಿಕ ಸೆಮಿಸ್ಟರ್‍ಗಳಿಗೆ (2ನೇ, 4ನೇ, 6ನೇ ಮತ್ತು 8ನೇ ಸೆಮಿಸ್ಟರ್‍ಗಳು) ಆನ್‍ಲೈನ್ ತರಗತಿಗಳನ್ನು ಶುರು ಮಾಡಬೇಕು. ಬಹುತೇಕ ಕೋರ್ಸ್‍ಗಳಿಗೆ ಕ್ಯಾರಿ ಓವರ್ ಪದ್ಧತಿ ಅನ್ವಯವಾಗುವುದರಿಂದ ಪದವಿ ಕೋರ್ಸ್‍ಗಳ ಬೆಸ ಸ್ಥಾನಿಕ ಸೆಮಿಸ್ಟರ್‍ಗಳಿಗೆ ಕೋವಿಡ್ ಪರಿಸ್ಥಿತಿ ತಹಬಂದಿಗೆ ಬಂದಮೇಲೆ ನಡೆಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.

COLLEGE 1

ಕೆಲವು ಎಂಜಿನಿಯರಿಂಗ್ ಮತ್ತು ವೃತ್ತಿಪರ ಕೋರ್ಸ್‍ಗಳಲ್ಲಿ ಮಾತ್ರ ಮುಂದಿನ ಸೆಮಿಸ್ಟರ್‍ಗಳಿಗೆ ಹೋಗಲು ಕ್ಯಾರಿ ಓವರ್ ಪದ್ಧತಿ ಅನ್ವಯವಾಗುವುದಿಲ್ಲ. ಅವುಗಳ ಬಗ್ಗೆ ಕುಲಪತಿಗಳು ಹಾಗೂ ಪ್ರಾಂಶುಪಾಲರುಗಳು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಜೊತೆ ಸಮಾಲೋಚನೆ ನಡೆಸಿ ನಿರ್ಧಾರಕ್ಕೆ ಬರಬೇಕು ಎಂದು ತಿಳಿಸಿದರು.

ಸ್ನಾತಕೋತ್ತರ ಕೋರ್ಸ್‍ಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಕೋವಿಡ್ ಕಾರಣದಿಂದಾಗಿ ಕೆಲವು ವಿಶ್ವವಿದ್ಯಾಲಯಗಳಲ್ಲಿ ಮೊದಲ ಸೆಮಿಸ್ಟರ್‍ಗೆ ಪ್ರವೇಶಾತಿ ಪ್ರಕ್ರಿಯೆ ವಿಳಂಬವಾಗಿದೆ. ಆದರೆ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಮೂರನೇ ಸೆಮಿಸ್ಟರ್‍ನ ತರಗತಿಗಳು ಮುಗಿದಿದ್ದು, ಕೆಲವೆಡೆ ಪರೀಕ್ಷೆಗಳು ಕೂಡ ಆರಂಭವಾಗಿದ್ದವು. ಹೀಗಾಗಿ ಸ್ನಾತಕೋತ್ತರ ಕೋರ್ಸ್‍ಗಳಿಗೆ ಸಂಬಂಧಿಸಿದಂತೆ ಮೂರನೇ ಸೆಮಿಸ್ಟರ್‍ನ ತರಗತಿಗಳು ಈಗಾಗಲೇ ಮುಗಿದಿದ್ದು, ಪರೀಕ್ಷೆಗಳನ್ನು ನಡೆಸುವುದು ಮಾತ್ರ ಬಾಕಿ ಉಳಿದಿದ್ದರೆ, ಸಮ ಸ್ಥಾನಿಕ ಸೆಮಿಸ್ಟರ್‍ಗಳಿಗೆ ಆನ್‍ಲೈನ್ ತರಗತಿಗಳನ್ನು ಆರಂಭಿಸಬೇಕು. ಬೆಸ ಸ್ಥಾನಿಕ ಸೆಮಿಸ್ಟರ್‍ಗಳಿಗೆ ಬಾಕಿ ಉಳಿಯುವ ಪರೀಕ್ಷೆಗಳನ್ನು ಕೋವಿಡ್ ನಿಯಂತ್ರಣಕ್ಕೆ ಬಂದಮೇಲೆ ನಡೆಸಲಾಗುವುದು ಎಂದರು.

Udupi College 4

ಬೆಸ ಸ್ಥಾನಿಕ ಸೆಮಿಸ್ಟರ್‍ಗಳಿಗೆ (1ನೇ, 3ನೇ, 5ನೇ, 7ನೇ ಸೆಮಿಸ್ಟರ್ ಗಳು) ಇನ್ನೂ ತರಗತಿಗಳನ್ನು ಮುಗಿಸದ ವಿಶ್ವವಿದ್ಯಾಲಯಗಳು ಆನ್‍ಲೈನ್ ತರಗತಿಗಳನ್ನು ಮುಂದುವರಿಸಬೇಕು. ಈ ತರಗತಿಗಳು ಮುಗಿದ ಮೇಲೂ ಕೋವಿಡ್‍ನಿಂದಾಗಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದಿದ್ದರೆ, ತಕ್ಷಣವೇ ಮುಂದಿನ ಸಮ ಸ್ಥಾನಿಕ ಸೆಮಿಸ್ಟರ್‍ಗಳಿಗೆ ಆನ್‍ಲೈನ್ ತರಗತಿಗಳನ್ನು ಶುರುಮಾಡಬೇಕು. ಇದರಿಂದಾಗಿ ಬಾಕಿ ಉಳಿಯುವ ಬೆಸ ಸ್ಥಾನಿಕ ಸೆಮಿಸ್ಟರ್ ಗಳ ಪರೀಕ್ಷೆಗಳನ್ನು ಕೋವಿಡ್ ನಿಯಂತ್ರಣಕ್ಕೆ ಬಂದಮೇಲೆ ನಡೆಸಲಾಗುತ್ತದೆ ಎಂದು ತಿಳಿಸಿದರು.

CET 1

ಪರಿಸ್ಥಿತಿಯ ಬೆಳವಣಿಗೆಗಳಿಗೆ ಅನುಗುಣವಾಗಿ ಕುಲಪತಿಗಳು ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‍ನೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅಲ್ಲಿ ಕೈಗೊಳ್ಳುವ ನಿರ್ಧಾರಗಳನ್ನು ಆಧರಿಸಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪಾಲಿಸಬೇಕಾದ ಮಾರ್ಗದರ್ಶಿ ಸೂತ್ರಗಳು ಹಾಗೂ ವೇಳಾಪಟ್ಟಿಯನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *