– ಅಪ್ಪ-ಅಮ್ಮ ಕ್ಷಮಿಸು ಬಿಡಿ ಅಂದ
– ಪತ್ನಿ ಸಾವಿಗೆ ಕಾರಣರಾದವ್ರಿಗೆ ಶಿಕ್ಷೆ ನೀಡಿ
ಹೈದರಾಬಾದ್: ಪತ್ನಿ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಪತಿಯೂ ಸೂಸೈಡ್ ಮಾಡಿಕೊಂಡ ಘಟನೆ ತೆಲಂಗಾಣದ ಸೂರ್ಯಪೇಟ್ ನಲ್ಲಿ ನಡೆದಿದೆ.
ಲಾವಣ್ಯ(21) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು, ಈಕೆ ಸೂರ್ಯಪೇಟ್ ನಲ್ಲಿ ಪಶು ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಳು. ವರದಕ್ಷಿಣೆ ಕಿರುಕುಳ ತಾಳಲಾರದೆ ಲಾವಣ್ಯ ಭಾನುವಾರ ವಿಷ ಸೇವಿಸಿದ್ದಾಳೆ. ಕೂಡಲೇ ಲಾವಣ್ಯಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೂಡ ನೀಡಲಾಗುತ್ತಿತ್ತು. ಈ ಮಧ್ಯೆ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಳು.
ಈಕೆಯ ಪತಿಯನ್ನು ಪೆದ್ದಪಂಗ ಪ್ರಣಯ್ ಎಂದು ಗುರುತಿಸಲಾಗಿದೆ. ಇವರಿಬ್ಬರು 2020ರ ಜೂನ್ 12ರಂದು ಸೂರ್ಯ ಪೇಟ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪ್ರಣಯ್ ಕೃಷಿ ಇಲಾಖೆಯಲ್ಲಿ ಎಒ ಆಗಿ ಕೆಲಸ ಮಾಡುತ್ತಿದ್ದನು.
ಇತ್ತೀಚೆಗೆ ಪ್ರಣಯ್ ಮನೆಯವರು ಹೆಚ್ಚಿನ ವರದಕ್ಷಿಣೆ ತರುವಂತೆ ಲಾವಣ್ಯರನ್ನು ಪೀಡಿಸಲು ಆರಂಭಿಸಿದ್ದಾರೆ. ಹೀಗಾಗಿ ಲಾವಣ್ಯರನ್ನು ಪ್ರಣಯ್ ಆಕೆಯ ತವರು ಮನೆಗೆ ಕಳುಹಿಸಿದ್ದನು. ಪತಿ ತನ್ನ ತವರು ಮನೆಗೆ ಕಳುಹಿಸಿದ್ದಕ್ಕೆ ಬೇಸರಗೊಂಡ ಲಾವಣ್ಯ ಈ ನಿರ್ಧಾರ ತೆಗೆದುಕೊಂಡಿದ್ದಾಳೆ.
ಮಾನಸಿಕವಾಗಿ ನೊಂದಿದ್ದ ಲಾವಣ್ಯ ವಿಷ ಸೇವಿಸಿ ಬಳಿಕ ಪತಿಗೆ ಕರೆ ಮಾಡಿದ್ದಾಳೆ. ಅಲ್ಲದೆ ನನ್ನ ಯಾಕೆ ತವರು ಮನೆಗೆ ಕಳುಹಿಸಿದ್ದೀಯಾ ಎಂದು ಪ್ರಶ್ನಿಸಿದ್ದಾಳೆ. ಪತಿ-ಪತ್ನಿ ಕೊನೆಯ ಬಾರಿ ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಣಯ್ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತ ಲಾವಣ್ಯ ವಿಷಸೇವಿಸಿ ಸಾವನ್ನಪ್ಪುತ್ತಿದ್ದಂತೆಯೇ ಪ್ರಣಯ್ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಲ್ಲದೆ ಡೆತ್ ನೋಡ್ ಕೂಡ ಬರೆದಿದ್ದು, ಅದರಲ್ಲಿ “ನಾನು ಈ ಜಗತ್ತಿನಿಂದಲೇ ದೂರ ಹೋಗುತ್ತಿದ್ದೇನೆ. ಅಪ್ಪ- ಅಮ್ಮ ನನ್ನನ್ನು ಕ್ಷಮಿಸಿ ಬಿಡಿ” ಎಂದು ಬರೆದಿದ್ದಾನೆ. ಅಲ್ಲದೆ ಲಾವಣ್ಯ ಇಲ್ಲದೆ ನನಗೆ ಬದುಕಲು ಇಷ್ಟವಿಲ್ಲ. ನನ್ನ ಪತ್ನಿಯ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮನವಿ ಕೂಡ ಮಾಡಿಕೊಂಡಿದ್ದಾನೆ.