– ಇಬ್ಬರನ್ನೂ ಕೂರಿಸಿ ಬುದ್ಧಿ ಹೇಳಿದರೂ ಪಟ್ಟು ಬಿಡದ ಜೋಡಿ
– ವಿಚ್ಛೇದನ ನೀಡುವಂತೆ ಪತ್ನಿ ಒತ್ತಾಯ, ಪತಿ ಆತ್ಮಹತ್ಯೆ
ಗಾಂಧಿನಗರ: ಪತ್ನಿ ಅಕ್ರಮ ಸಂಬಂಧ ಹೊಂದಿದ್ದರಿಂದ ಮನನೊಂದ ಪತಿ, ನಿರ್ಮಾಣ ಹಂತದಲ್ಲಿದ್ದ ಬಹು ಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗುಜರಾತ್‍ನ ಸೂರತ್‍ನ ಪಾಲ್ ಘಟನೆ ನಡೆದಿದ್ದು, ಸಂತ್ರಸ್ತನನ್ನು ಪರಾಸ್ ಖನ್ನಾ ಎಂದು ಗುರುತಿಸಲಾಗಿದೆ. ಖನ್ನಾ ಆಟೋಮೊಬೈಲ್ ರೀಸೆಲ್ಲರ್ ಆಗಿದ್ದು, 12 ವರ್ಷಗಳ ಹಿಂದೆ ಹೀನಾಳನ್ನು ವಿವಾಹವಾಗಿದ್ದ. ಆದರೆ ಪತ್ನಿ ಸ್ತುತಿ ಈಕಾನ್ ಅಪಾರ್ಟ್‍ಮೆಂಟ್‍ನಲ್ಲಿ ವಾಚ್‍ಮ್ಯಾನ್ ಕೆಲಸ ಮಾಡುತ್ತಿದ್ದ ಅಂಕಿತ್ ಪ್ರಸಾದ್ ಎಂಬುವವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.
ಕೆಲ ದಿನಗಳ ಕಾಲ ಡೇಟಿಂಗ್ ಬಳಿಕ 12 ವರ್ಷಗಳ ಹಿಂದೆ ಖನ್ನಾ ಹಾಗೂ ಹೀನಾ ದಂಪತಿ ವಿವಾಹವಾಗಿದ್ದರು. ದಂಪತಿಗೆ ಮಕ್ಕಳಾಗಿಲ್ಲ. ಕಳೆದ 8 ತಿಂಗಳ ಹಿಂದೆ ಸ್ತುತಿ ಅಪಾರ್ಟ್‍ಮೆಂಟ್‍ಗೆ ಸ್ಥಳಾಂತರಗೊಂಡಿದ್ದರು. ಈ ವೇಳೆ ಹೀನಾ ಅದೇ ಅಪಾರ್ಟ್‍ಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದ ಪ್ರಸಾದ್ ಜೊತೆ ಸಂಪರ್ಕ ಬೆಳೆಸಿದ್ದಾಳೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ನಂತರ ದೈಹಿಕ ಸಂಬಂಧವನ್ನೂ ಬೆಳೆಸಿದ್ದಾರೆ. ಅಕ್ರಮ ಸಂಬಂಧದ ಕುರಿತು ಅರಿತ ಖನ್ನಾ, ಇಬ್ಬರೊಂದಿಗೆ ಮಾತನಾಡಿ ಸಂಬಂಧವನ್ನು ಕೊನೆಗೊಳಿಸುವಂತೆ ಮನವಿ ಮಾಡಿದ್ದಾನೆ. ಆದರೆ ಇಬ್ಬರೂ ಇದನ್ನು ಒಪ್ಪಿಲ್ಲ.
ಹೀನಾ ತನಗೆ ವಿಚ್ಛೇದನ ನೀಡುವಂತೆ ಪತಿಗೆ ಒತ್ತಡ ಹೇರಿದ್ದು, ಬಳಿಕ ಇಬ್ಬರೂ ದೂರವಾಗಿದ್ದರು. ಬಳಿಕ ಖನ್ನಾ ಆರಂಭದಲ್ಲಿ ನವೆಂಬರ್‍ನಲ್ಲಿ ಓಎನ್‍ಜಿಸಿ ಸೇತುವೆ ಮೇಲಿಂದ ಜಿಗಿಯಲು ಯೋಜನೆ ರೂಪಿಸಿದ್ದ. ಆದರೆ ಅಲ್ಲಿದ್ದವರು ತಡೆದಿದ್ದರು. ಪದೇ ಪದೇ ನಡೆಯುತ್ತಿದ್ದ ವಿವಾದಗಳಿಂದಾಗಿ ಬೇಸತ್ತು ಖನ್ನಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ಬಳಿಕ ಖನ್ನಾ ತಾಯಿ ನೀಲಂ ಅವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಖನ್ನಾ ಆರೋಪಿ ಚಿತ್ರಗಳನ್ನು ತನ್ನ ಸ್ನೇಹಿತನಿಗೆ ಕಳುಹಿಸಿದ್ದು, ನನ್ನ ಆತ್ಮಹತ್ಯೆಗೆ ಇವನೇ ಕಾರಣ ಎಂದು ತಿಳಿಸಿದ್ದಾನೆ. ಇದೀಗ ಆರೋಪಿ ಪರಾರಿಯಾಗಿದ್ದು, ಹೀನಾಳನ್ನು ಪೊಲೀಸರು ಬಂಧಿಸಿದ್ದಾರೆ.