ಮಂಡ್ಯ: ಪತ್ನಿ ಶೀಲ ಶಂಕಿಸುತ್ತಿದ್ದ ಪತಿಯನ್ನು ಆತನ ಮಗನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಜಿಲ್ಲೆಯ ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿಯಲ್ಲಿ ಘಟನೆ ನಡೆದಿದ್ದು, 44 ವರ್ಷದ ದೇವರಾಜುನನ್ನು ಆತನ ಮಗ ಕೊಲೆ ಮಾಡಿದ್ದಾನೆ. ಕೂಲಿ ಮಾಡಿ ಬದುಕುತ್ತಿದ್ದ ಬಡ ಕುಟುಂಬದಲ್ಲಿ ಇದ್ದದ್ದು ಪತಿ, ಪತ್ನಿ ಹಾಗೂ ಒಬ್ಬನೇ ಮಗ. ಈ ನಡುವೆ ಮನೆಯ ಯಜಮಾನ ಎನಿಸಿಕೊಂಡ ಪತಿಗೆ ಪತ್ನಿ ನಡತೆ ಬಗ್ಗೆ ಅನುಮಾನ ಶುರುವಾಗಿತ್ತು. ಈ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳ, ರಂಪಾಟವಾಗುತ್ತಿತ್ತು. ಇದರಿಂದ ಬೇಸತ್ತ ಮಗ, ತಂದೆಯನ್ನೇ ಕೊಂದಿದ್ದಾನೆ.
ದೇವರಾಜು 20 ವರ್ಷಗಳ ಹಿಂದೆ ಸಾವಿತ್ರಮ್ಮಳನ್ನು ವಿವಾಹವಾಗಿದ್ದ. ಈ ದಂಪತಿಗೆ ಅಪ್ಪು ಎಂಬ 19 ವರ್ಷದ ಮಗನೂ ಇದ್ದ. ಗ್ರಾಮದಲ್ಲಿ ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ದಂಪತಿಗೆ, ಮಗ ಗೂಡ್ಸ್ ಆಟೋ ಓಡಿಸಿಕೊಂಡು ನೆರವಾಗಿದ್ದ. ಹೀಗಿರುವಾಗಲೇ ಇತ್ತೀಚೆಗೆ ಪತ್ನಿ ಸಾವಿತ್ರಮ್ಮಳ ನಡವಳಿಕೆ ಬಗ್ಗೆ ದೇವರಾಜುಗೆ ಅನುಮಾನ ಶುರುವಾಗಿತ್ತು. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳವೂ ನಡೆಯುತ್ತಿತ್ತು.
ನಿತ್ಯ ಅಪ್ಪ, ಅಮ್ಮನ ಜಗಳ ನೋಡಿ ಮಗ ಬೇಸತ್ತಿದ್ದ. ಅಲ್ಲದೆ ಅಮ್ಮನ ಬಗ್ಗೆ ಅಪ್ಪ ಅನುಮಾನ ಪಡುವುದು ಹಾಗೂ ಆಕೆಯ ಮೇಲೆ ಹಲ್ಲೆ ನಡೆಸುವುದನ್ನು ಖಂಡಿಸುತ್ತಿದ್ದ. ನಿನ್ನೆಯೂ ಅಪ್ಪನ ಜಗಳ ಶುರುವಾಗಿ ವಿಕೋಪಕ್ಕೆ ಹೋಗಿತ್ತು. ಈ ವೇಳೆ ಮಗ ಕಬ್ಬಿಣದ ರಾಡ್ ಹಿಡಿದುಕೊಂಡು ಅಪ್ಪನ ಮೇಲೆ ಹಲ್ಲೆಗೆ ಮುಂದಾಗಿದ್ದ. ಪಕ್ಕದ ಮನೆಯವರು ಜಗಳ ಬಿಡಿಸಿ ಇಬ್ಬರನ್ನೂ ಸಮಾಧಾನ ಮಾಡಿದ್ದರು.
ಇದಾದ ಕೆಲವೇ ಸಮಯದಲ್ಲಿ ಮತ್ತೆ ಜಗಳ ಶುರು ಮಾಡಿದ್ದ ದೇವರಾಜು, ಪತ್ನಿ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಸಾವಿತ್ರಮ್ಮ ತಲೆಗೆ ಪಟ್ಟಾಗಿತ್ತು. ಇದನ್ನು ನೋಡಿ ಕೋಪಗೊಂಡ ಮಗ ಅಪ್ಪು, ತಂದೆಯ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದ. ತೀವ್ರ ರಕ್ತ ಸ್ರಾವದಿಂದ ಒದ್ದಾಡುತ್ತಿದ್ದ ದೇವರಾಜುನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೋಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪಾಂಡವಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅಪ್ಪು ಬಂಧನಕ್ಕೆ ಬಲೆ ಬೀಸಿದ್ದಾರೆ.