ಕೊಪ್ಪಳ: ಪತ್ನಿಯ ಚಿಕಿತ್ಸಾ ವೆಚ್ಚ ಭರಿಸಲಾಗದೆ ಕಂಗಾಲಾದ ಅತಿಥಿ ಉಪನ್ಯಾಸಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತನ್ನ ನೋವನ್ನ ಹೇಳಿಕೊಂಡಿದ್ದಾರೆ.
ಡಾ.ಮಂಜಣ್ಣ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರ್ ರಾವ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿದ್ದಾರೆ. ಇದೀಗ ತನ್ನ ಪತ್ನಿಯ ವೈದ್ಯಕೀಯ ವೆಚ್ಚ ಭರಿಸಲು ಸಹಾಯ ಮಾಡುವಂತೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಬಳಿ ಸಾಮಾಜಿಕ ಜಾಲತಾಣದ ಮೂಲಕ ಬೇಡಿಕೊಂಡಿದ್ದಾರೆ.
ಮಂಜಣ್ಣ ಅವರ ಪತ್ನಿ ಕಿಡ್ನಿ ಹಾಗೂ ಶ್ವಾಸಕೋಶ ವೈಫಲ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನದ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಬೇಕಾಗಿದೆ. ಆದರೆ ಆಕೆಯ ಚಿಕಿತ್ಸೆ ವೆಚ್ಚ ಭರಿಸಲಾಗದೆ ಕೈಚೆಲ್ಲಿ ಕುಳಿತಿದ್ದಾರೆ. ಅದಕ್ಕಾಗಿ ಸಾಮಾಜಿಕ ಜಾಲತಾಣದ ಮೂಲಕ ಸಚಿವರಲ್ಲಿ ಬೇಡಿಕೊಂಡಿದ್ದು, ಯಾರಾದರೂ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.