– 20 ದಿನಗಳ ಹಿಂದೆಯಷ್ಟೆ ಬಾಡಿಗೆ ಮನೆಗೆ ಬಂದಿದ್ರು
ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯ ಕತ್ತು ಕುಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಚಂದಾಪುರದ ಸಮೀಪದ ಬನಹಳ್ಳಿಯಲ್ಲಿ ನಡೆದಿದೆ.
ಯೋಗಶ್ರೀ ಕೊಲೆಯಾದ ಮಹಿಳೆ. ಭಾನುವಾರ ಸುಮಾರು 4 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಮಾಲೂರು ತಾಲೂಕಿನ ಕಡೂರು ಮೂಲದ ಅರುಣ್ ಎಂದು ಗುರುತಿಸಲಾಗಿದೆ.
ಆರೋಪಿ ಅರುಣ್ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಮೂಲದ ಯೋಗಶ್ರೀ ಜೊತೆ ಕೆಲವು ವರ್ಷಗಳು ಮದುವೆಯಾಗಿದ್ದನು. ದಂಪತಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಪ್ಪತ್ತು ದಿನಗಳ ಹಿಂದೆಯಷ್ಟೆ ಚಂದಾಪುರದ ಸಮೀಪದ ಬನಹಳ್ಳಿಯ ಬಾಡಿಗೆ ಮನೆಗೆ ಬಂದಿದ್ದರು. ಆನೇಕಲ್ ತಾಲೂಕಿನ ಸಮಂದೂರು ಗ್ರಾಮದ ತೋಟವೊಂದರಲ್ಲಿ ದಂಪತಿ ಕೆಲಸಕ್ಕೆ ಹೋಗುತ್ತಿದ್ದರು.
ಭಾನುವಾರ ಗಂಡ-ಹೆಂಡತಿ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ಹೋಗಿ ಆರೋಪಿ ಅರುಣ್ ಪತ್ನಿಯ ಕತ್ತು ಕುಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಮಾಹಿತಿ ತಿಳಿದು ಸೂರ್ಯನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಆರೋಪಿ ಅರುಣ್‍ನನ್ನು ಪೊಲೀಸರು ಬಂಧಿಸಿದ್ದಾರೆ.