– 30 ಬೈಕ್ ಕದ್ದಿದ್ದ ಆರೋಪಿ ಅರೆಸ್ಟ್
ಗಾಂಧಿನಗರ: ಪತ್ನಿಯ ಐಷಾರಾಮಿ ಆಸೆಗಳನ್ನು ಈಡೇರಿಸಲು ವ್ಯಕ್ತಿಯೊಬ್ಬ ಬೈಕ್ ಕಳ್ಳತನಕ್ಕಿಳಿದಿದ್ದು, ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.
ಗುಜರಾತ್‍ನ ಸೂರತ್‍ನಲ್ಲಿ ಘಟನೆ ನಡೆದಿದ್ದು, ವಜ್ರ ಕುಶಲಕರ್ಮಿಯಾಗಿದ್ದ ಬಲವಂತ್ ಚೌಹಾಣ್, ತನ್ನ ಪತ್ನಿಯ ಐಶಾರಾಮಿ ಆಸೆಗಳನ್ನು ಈಡೇರಿಸಲು ಬೈಕ್ ಕಳ್ಳತನಕ್ಕೆ ಇಳಿದಿದ್ದ. ಪತ್ನಿ ಯಾವಾಗಲೂ ಐಶಾರಾಮಿ ಜೀವನ ನಡೆಸಲು ಬಯಸುತ್ತಿದ್ದಳು. ಆದರೆ ಚೌಹಾಣ್ ಆದಾಯಕ್ಕೆ ಸಾಲುತ್ತಿರಲಿಲ್ಲ. ಹೀಗಾಗಿ ಬೈಕ್ ಕಳ್ಳತನಕ್ಕೆ ಇಳಿದಿದ್ದ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿ ಉತ್ರಾನ್ ನಿವಾಸಿಯಾಗಿದ್ದು, ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಚೌಹಾಣ್ ಪತ್ನಿ ತನ್ನ ಅಕ್ಕನನ್ನು ನೋಡಿ ಅಸೂಯೆ ಪಟ್ಟುಕೊಳ್ಳುತ್ತಿದ್ದಳು. ಬಳಿಕ ಅವರಂತೆ ನಾವೂ ಐಶಾರಾಮಿ ಜೀವನ ನಡೆಸಬೇಕು ಎಂದು ಪತಿಯನ್ನು ಪೀಡಿಸುತ್ತಿದ್ದಳು.
ಚೌಹಾಣ್ ಮಾವ ಬಿಲ್ಡರ್ ಆಗಿದ್ದು, ಅವರ ಬಳಿ ಆರ್ಟಿಶಿಯನ್ ಆಗಿ ಕೆಲಸ ಮಾಡುತ್ತಿದ್ದ. 15ರಿಂದ 20 ಸಾವಿರ ರೂ.ಸಂಪಾದಿಸುತ್ತಿದ್ದ. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಕೆಲಸ ಕಳೆದುಕೊಂಡಿದ್ದ. ಬಳಿಕ ತಾನು ಅಂದುಕೊಂಡಷ್ಟು ಹಣ ಸಂಪಾದಿಸಲು ಆಗುತ್ತಿಲ್ಲವೆಂದು ಬೈಕ್ ಕದಿಯಲು ಆರಂಭಿಸಿದ್ದ. ಕಪೋದರ, ವರಾಚಾ, ಅಮ್ರೋಲಿ ಹಾಗೂ ಕತಾರ್ಗಂ ಪ್ರದೇಶಗಳಲ್ಲಿನ 30 ಬೈಕ್‍ಗಳನ್ನು ಕದ್ದಿದ್ದಾನೆ. ಇದೀಗ ಎಲ್ಲ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ವಜ್ರದ ಯುನಿಟ್ ಹಾಗೂ ಶಾಪಿಂಗ್ ಮಾಲ್‍ಗಳ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ ಬೈಕ್‍ಗಳನ್ನು ಟಾರ್ಗೆಟ್ ಮಾಡಿ ಕದಿಯುತ್ತಿದ್ದ. ಈತ ವಜ್ರದ ಯುನಿಟ್‍ನಲ್ಲಿ ಕೆಲಸ ಮಾಡಿದ್ದರಿಂದ ಅಲ್ಲಿ ಕೆಲಸ ಮಾಡುವ ನೌಕರರ ಸಮಯ ತಿಳಿದಿತ್ತು. ಹೀಗಾಗಿ ಯಾರೂ ಇಲ್ಲದ ಸಮಯದಲ್ಲಿ ಬೈಕ್‍ಗಳನ್ನು ಕದಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಊಟದ ಸಮಯದ ಬಳಿಕ ಹೆಚ್ಚು ಹೊತ್ತು ಬೈಕ್‍ಗಳನ್ನು ನಿಲ್ಲಿಸುವುದನ್ನು ಅರಿತಿದ್ದ ಆರೋಪಿ ಇದೇ ಸಮಯದಲ್ಲಿ ಕದಿಯುತ್ತಿದ್ದ. ಆರೋಪಿ ಭಾವನಗರ ಜಿಲ್ಲೆಯ ಜಲಿಯಾ ಗ್ರಾಮದವನಾಗಿದ್ದು, 2017ರಲ್ಲಿ ಕದಿಯಲು ಆರಂಭಿಸಿದ್ದಾನೆ. ಬಳಿಕ 2019ರಲ್ಲಿ ಮತ್ತೆ ಕದಿಯಲು ಆರಂಭಿಸಿದ್ದು, 4 ಬೈಕ್‍ಗಳನ್ನು ಕದ್ದಿದ್ದಾನೆ. 2020ರಲ್ಲಿ ಬರೋಬ್ಬರಿ 20 ಬೈಕ್‍ಗಳನ್ನು ಕದ್ದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.