– ಹೆಂಡ್ತಿ ಬರುತ್ತಿದ್ದಂತೆ ಬುಲೆಟ್ ಬಾಬಾ ಎಸ್ಕೇಪ್
ಯಾದಗಿರಿ: ಜಿಲ್ಲೆಯ ಗುರುಮಠಕಲ್ ಸಮೀಪದ ಕೇಶ್ವಾರ ಗ್ರಾಮದ ಹೊರವಲಯದಲ್ಲಿ ಸ್ವಯಂ ಘೋಷಿತ ಬುಲೆಟ್ ಬಾಬಾನ ಅಸಲಿ ಮುಖ ಇದೀಗ ಆತನ ಪತ್ನಿಯಿಂದಲೇ ಬಯಲಾಗಿದೆ.
ಬುಲೆಟ್ ಬಾಬಾ ಅಲಿಯಾಸ್ ಜಾನು ರಾಜು, ಶಿವಾರೆಡ್ಡಿ ಎಂಬ ನಾನಾ ಹೆಸರಿನ ಈತ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಲೆಟ್ ಬಾಬಾ ಎಂದೇ ಪ್ರಸಿದ್ಧಿ ಪಡೆದುಕೊಂಡಿದ್ದನು. ಬಾಬಾನ ಹತ್ತಿರ ಯಾವುದೇ ಪವಾಡ ನಡೆಸುವ ಶಕ್ತಿಯಿಲ್ಲ. ಆತನೊಬ್ಬ ಮೋಸಗಾರ ಎಂದು ಆತನ ಪತ್ನಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ.
- Advertisement
ಬುಲೆಟ್ ಬಾಬಾ ಅಲಿಯಾಸ್ ಶಿವಾರೆಡ್ಡಿ ಎಂದು ಹೆಸರು ಹೇಳಿಕೊಂಡು ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದನು. ಈ ಬಾಬಾ ಮೊದಲಿಗೆ 5 ವರ್ಷಗಳ ಹಿಂದೆ ಯಾನಾಗುಂದಿಗೆ ಬಂದು ಅಲ್ಲಿಯೇ ಆಯುರ್ವೆದ ಔಷಧಿ ನೀಡುತ್ತಾ ಕೇಶ್ವಾರ ಗ್ರಾಮಸ್ಥರೊಬ್ಬರ ಮೂಲಕ ಗ್ರಾಮಕ್ಕೆ ಮಹಿಳೆಯೊಂದಿಗೆ ಬಂದು ವಾಸವಾಗಿದ್ದನು. ತದನಂತರ ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ತಾವೊಬ್ಬ ಬಾಬಾ ಆಗಿದ್ದು, ತನ್ನಲ್ಲಿ ಶಕ್ತಿ ಇದೆ ಎಂದು ನಂಬಿಸುತ್ತಿದ್ದನು. ಆತನ ಜೊತೆಗೆ ಬಂದ ಮಹಿಳೆಯನ್ನು ತನ್ನ ಹೆಂಡತಿ ಎಂದು ಹೇಳಿಕೊಂಡಿದ್ದನು. ಅಲ್ಲದೇ ಹಲವರಿಂದ ಹಣ ವಸೂಲಿ ಮಾಡಿಕೊಂಡಿದ್ದಾನೆ ಎಂಬ ಆರೋಪಗಳಿವೆ.
- Advertisement
ಅಷ್ಟೇ ಅಲ್ಲದೇ ಗ್ರಾಮದಲ್ಲಿ ಒಬ್ಬರ ಹೊಲದಲ್ಲಿ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿ ಅವರ ಹೊಲದಲ್ಲಿಯೇ ಆಶ್ರಮ ನಿರ್ಮಾಣ ಮಾಡಿದ್ದಾನೆ. ನಿತ್ಯವು ಬುಲೆಟ್ ವಾಹನದಲ್ಲಿ ದಟ್ಟನೆಯ ಕೂದಲು ಬಿಟ್ಟು ಓಡಾಡುತ್ತಿದ್ದನು. ಹೀಗಾಗಿ ಈತ ಬುಲೆಟ್ ಬಾಬಾ ಎಂದು ಪ್ರಸಿದ್ಧಿಯಾಗಿದ್ದನು. ಈತನ ಬಗ್ಗೆ ತಿಳಿದ ಪತ್ನಿ ಇಲ್ಲಿಗೆ ಬಂದು ಗ್ರಾಮಸ್ಥರಿಗೆ ಎಲ್ಲವನ್ನು ಹೇಳಿದ್ದಾರೆ. ಆದರೆ ಪತ್ನಿ ಬರುತ್ತಿದ್ದಂತೆ ನಕಲಿ ಬಾಬಾ ಪರಾರಿಯಾಗಿದ್ದಾನೆ.
ಹಲವರ ಜೊತೆ ಅಕ್ರಮ ಸಂಬಂಧ
ಈ ಬಾಬಾ ಮೂಲತಃ ಆಂಧ್ರ ಪ್ರದೇಶದ ವರಂಗಲ್‍ನ ಲೇಬರ್ ಕಾಲೋನಿಯ ನಿವಾಸಿ. ಈತನ ಹೆಸರು ಜನ್ನು ರಾಜು. 2003ರಲ್ಲಿ ಯುವತಿಯೊಂದಿಗೆ ಅಂತರಜಾತಿ ವಿವಾಹವಾಗಿದ್ದ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಸಹ ಇದ್ದರು. ಸಂಸಾರ ಸರಿಯಾಗಿ ಸಾಗುತ್ತಿರುವಾಗಲೇ ಬೇರೆ ಹೆಣ್ಣಿನ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದನು. ಇದರಿಂದ ಇಬ್ಬರ ಮಧ್ಯೆ ಜಗಳವಾಗಿದ್ದು, ಬಳಿಕ ಅಲ್ಲಿಂದ ಪರಾರಿಯಾಗಿದ್ದನು.
ಈ ಕುರಿತು ಮೊದಲ ಪತ್ನಿ 2015ರಲ್ಲಿಯೇ ತೆಲಂಗಾಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆರೋಪಿ ಬಾಬಾ ಅನೇಕ ಮಹಿಳೆಯ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. ನಂತರ 2016ರಲ್ಲಿ ಮತ್ತು 2019ರಲ್ಲಿಯೂ ಇತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.