ಗಾಂಧಿನಗರ: ಕೊನೆಯವರೆಗೂ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ಮದುವೆಯಾದ ವ್ಯಕ್ತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿದ್ದಲ್ಲದೇ ಶವದ ಜೊತೆ ಮಲಗಿ ಎದ್ದು ಹೋದ ವಿಲಕ್ಷಣ ಘಟನೆಯೊಂದು ಗುಜರಾತ್ ನಲ್ಲಿ ನಡೆದಿದೆ.
ಆರೋಪಿ ಪತಿಯನ್ನು ಕೇದ್ಬಾರಾಮದ ಲಿಖರಾಮ್ ಅಲಿಯಾಸ್ ಲಕ್ಷ್ಮಣ್ ಕೇಶರಾಮ್ ಚೌಧರಿ ಎಂದು ಗುರುತಿಸಲಾಗಿದೆ. ಈತ ಕೆಲ ವರ್ಷಗಳ ಹಿಂದೆ ಏಜೆಂಟ್ ಮುಖಾಂತರ ವಧು ಹುಡುಕಿ ಮದುವೆಯಾಗಿದ್ದ. ತನ್ನ ಮದುವೆಗಾಗಿ ಸುಮಾರು 3 ಲಕ್ಷ ಹಣ ಕೂಡ ಖರ್ಚು ಮಾಡಿದ್ದನು.
ಮದುವೆಯಾದ ಮೊದ ಮೊದಲು ಅನ್ಯೋನ್ಯವಾಗಿಯೇ ಇದ್ದ ದಂಪತಿ ಮಧ್ಯೆ ಕ್ರಮೇಣ ಜಗಳಗಳು ಆರಂಭವಾದವು. ಇದರಿಂದ ಬೇಸತ್ತ ಲಕ್ಷ್ಮಣ್, ಡಿಸೆಂಬರ್ 4ರಂದು ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಗೋಣಿಚೀಲವೊಂದರಲ್ಲಿ ಹಾಕಿ ಅದರ ಜೊತೆ ಮಲಗಿ ಬೆಳಗ್ಗೆ ಎದ್ದು ಹೋಗಿದ್ದಾನೆ.
ತರಕಾರಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ ಲಕ್ಷ್ಮಣ್, ಎಂದಿನಂತೆ ತನ್ನ ಗಾಡಿಯನ್ನು ತಳ್ಳಿಕೊಂಡು ಹೋಗಿದ್ದಾನೆ. ಅಲ್ಲದೆ ಸುಮಾರು 140 ಕಿ.ಮೀ ದೂರದಲ್ಲಿ ತರಕಾರಿ ಮಾರಾಟ ಕೂಡ ಮಾಡಿ ಅಲ್ಲಿಂದ ಬೇರೆಡೆ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದಾರೆ. ಈ ಮಧ್ಯೆ ಪೊಲೀಸರು ಪ್ರಕರಣ ಭೇದಿಸಿ ಆರೋಪಿ ಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.