ಚಾಮರಾಜನಗರ: ಪತ್ನಿಗೆ ವೀಡಿಯೋ ಕಾಲ್ ಮಾಡಿ, ಆದಷ್ಟು ಬೇಗ ಮರಳಿ ಬರುತ್ತೇನೆಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಬಳಿಕ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ಗುಂಡ್ಲುಪೇಟೆಯ ಯೋಧ ಕೊನೆಯುಸಿರೆಳೆದಿದ್ದಾರೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಕೇರಿ ಗ್ರಾಮದ ಶಿವಕುಮಾರ್(31) ಮೃತ ಸಿಆರ್ ಪಿಎಫ್ ಯೋಧ. ಹೃದಯಾಘಾತದಿಂದ ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ಪತ್ನಿಗೆ ವೀಡಿಯೋ ಕಾಲ್ ಮಾಡಿ, ಆದಷ್ಟು ಬೇಗ ಮತ್ತೆ ಮನೆಗೆ ಬರುತ್ತೇನೆಂದು ಸಮಾಧಾನ ಹೇಳಿ ಫೋನ್ ಕಟ್ ಮಾಡಿದ್ದು, ಬಳಿಕ 3 ಗಂಟೆಗಳಲ್ಲಿ ಹೃದಯಾಘಾತವಾಗಿದೆ. ಯೋಧನನ್ನು ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಮೃತ ಯೋಧನಿಗೆ ಎರಡು ಮಕ್ಕಳಿದ್ದು, ಇಂದು ರಾತ್ರಿ ಶಿವಕುಮಾರ್ ಪಾರ್ಥಿವ ಶರೀರ ಹುಟ್ಟೂರಿಗೆ ಬರುವ ಸಾಧ್ಯತೆ ಇದೆ.
ಯೋಧ ಶಿವಕುಮಾರ್ ಕಳೆದ 8 ವರ್ಷಗಳಿಂದ ಸಿಆರ್ ಪಿಎಫ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ದೆಹಲಿಯಲ್ಲಿ ನಿಯೋಜನೆಗೊಂಡಿದ್ದರು. ಕೊರೊನಾ ಸಮಯದಲ್ಲಿ ಮೂರು ತಿಂಗಳು ರಜೆ ತೆಗೆದುಕೊಂಡು ಊರಿಗೆ ಬಂದಿದ್ದ ಶಿವಕುಮಾರ್, ಕಳೆದ 8 ದಿನಗಳ ಹಿಂದೆಯಷ್ಟೇ ಕರ್ತವ್ಯಕ್ಕೆ ಮರಳಿದ್ದರು.