ನವದೆಹಲಿ: ಮಹಿಳೆಯೊಬ್ಬಳು ವಿವಾಹಿತ ಪುರುಷನೊಂದಿಗೆ ಇದ್ದ ಸಂಬಂಧವನ್ನು ಕೊನೆಗೊಳಿಸಿದ ಕಾರಣಕ್ಕಾಗಿ ಆಕೆಯ ಮಗನನ್ನು ಉಸಿರುಗಟ್ಟಿಸಿ ಕೊಂದ ಘಟನೆ ದೆಹಲಿಯ ವಿಹಾರ್-ನಿಹಾರ್ ಪ್ರದೇಶದಲ್ಲಿ ನಡೆದಿದೆ.
15 ವರ್ಷದ ಬಾಲಕನನ್ನು ನಾಲ್ವರು ಆರೋಪಿಗಳು ನೆಪ ಹೇಳಿ ತಮ್ಮ ಕಾರಿಗೆ ಹತ್ತಿಸಿಕೊಂಡು ಹೋಗಿದ್ದಾರೆ. ನಂತರ ಉಸಿರುಗಟ್ಟಿಸಿ ಕೊಂದು ಶವವನ್ನು ಎಸೆದು ಹೋಗಿದ್ದಾರೆ.
ಬಾಲಕನ ಶವ ಸಿಕ್ಕ ಬೆನ್ನಲ್ಲೇ ಪೊಲೀಸರು ಆರೋಪಿಗಳ ಜಾಡು ಹಿಡಿದು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಈ ಪ್ರಕರಣದ ಸೂತ್ರದಾರ ಪ್ರದೀಪ್ ಸಿಂಗ್ ಸೇರಿದಂತೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಅಂಕಿತ್ ಪ್ರಜಾಪತಿ ಮತ್ತು ಪ್ರದೀಪ್ ಸಿಂಗ್‍ನ ಸಹೋದರನಾದ ಕಪಿಲ್ ಸಿಂಗ್‍ನ್ನು ಬಂಧಿಸಿದ್ದಾರೆ.
ಆರೋಪಿ ಪ್ರದೀಪ್‍ಗೆ ಮೊದಲೇ ಬೋರೊಂದು ಮದುವೆಯಾಗಿತ್ತು. ಆದರೂ ಹತ್ಯೆಗೀಡಾದ ಬಾಲಕನ ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ಕಾರಣಕ್ಕಾಗಿ ಪ್ರದೀಪ್ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಇತ್ತ ನಿನ್ನ ಪತ್ನಿಗೆ ಡಿವೋರ್ಸ್ ನೀಡಿ ತನ್ನನ್ನು ಮದುವೆಯಾಗುವಂತೆ ಬಾಲಕ ತಾಯಿ ಪ್ರದೀಪ್ ಬಳಿ ಕೇಳಿಕೊಂಡಿದ್ದಳು. ಆದರೆ ಪ್ರದೀಪ್ ಈಕೆಯ ಮಾತನ್ನು ನಿರಾಕರಿಸಿದ್ದಾನೆ. ತನ್ನ ಮಾತನ್ನು ಪ್ರದೀಪ್ ಒಪ್ಪದಿದ್ದಾಗ ಆತನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ಬಾಲಕನ ತಾಯಿ ಯತ್ನಿಸಿದ್ದಳು. ಅಲ್ಲದೆ ಕೆಲದಿನಗಳ ನಂತರ ಬೇರೊಂದು ಮದುವೆಯಾಗಲು ತಯಾರಾಗಿದ್ದಳು.
ಇದರಿಂದ ರೊಚ್ಚಿಗೆದ್ದ ಪ್ರದೀಪ್, ಮಹಿಳೆಯ ವಿರುದ್ಧ ಸೇಡು ತಿರಿಸಲು ಹೊಂಚುಹಾಕುತ್ತಿದ್ದ. ಡಿಸೆಂಬರ್ 22 ರಂದು ಹುಡುಗನನ್ನು ಪುಸಲಾಯಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ನಂತರ ಪ್ರದೀಪ್, ಬಾಲಕನ ತಾಯಿಗೆ ಕರೆ ಮಾಡಿ ಬಾಲಕನನ್ನು ಅಪಹರಣ ಮಾಡಿರುವುದಾಗಿ ಹೇಳಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಇದರಿಂದ ಬಾಲಕನ ತಾಯಿ ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ಅರೋಪಿಯ ಮೊಬೈಲ್ ಫೋನ್‍ನನ್ನು ಟ್ರ್ಯಾಕ್ ಮಾಡಿದಾಗ ಫರಿದಾಬಾದ್‍ನಲ್ಲಿ ಪತ್ತೆಯಾಗಿತ್ತು. ಅಲ್ಲಿಗೆ ತೆರಳಿದಾಗ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಮರಣೋತ್ತರ ಪರೀಕ್ಷೆಯ ನಂತರ ಬಾಲಕನ್ನು ಕತ್ತುಹಿಸುಕಿ ಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿ ಪ್ರದೀಪ್‍ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.