ಬೆಂಗಳೂರು: ಪತ್ನಿಗೆ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ನಗರದ ಬಸವೇಶ್ವರ ನಗರದಲ್ಲಿ ಘಟನೆ ನಡೆದಿದ್ದು, ಆರೋಪಿ ಕಲ್ಲಪ್ಪ ತನ್ನ ಪತ್ನಿ ಸುಮಿತ್ರಾ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಸಿಂಗಲ್ ಬ್ಯಾರೆಲ್ ಗನ್‍ನಿಂದ ಗುಂಡಿಕ್ಕಿ ಕಲ್ಲಪ್ಪ ಪತ್ನಿಯನ್ನು ಹತ್ಯೆಗೈದಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಜಿಎಂಎಸ್ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಎಟಿಎಂಗಳಿಗೆ ಹಣ ತುಂಬುತ್ತಿದ್ದ ವಾಹನಗಳಲ್ಲಿ ಆರೋಪಿ ಕಲ್ಲಪ್ಪ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ. ಆದರೆ ಕೆಲ ದಿನಗಳಿಂದ ಆರೋಪಿ ಕೆಲಸ ಕಳೆದುಕೊಂಡಿದ್ದ. ಇದರಿಂದ ಹತಾಶನಾಗಿ ಸಿಕ್ಕಾಪಟ್ಟೆ ಕುಡಿಯುತ್ತಿದ್ದ. ಅಲ್ಲದೆ ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ. ಇದೇ ವಿಚಾರವಾಗಿ ಹಲವು ಬಾರಿ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಅದೇ ರೀತಿ ಇಂದು ಸಹ ಬಡಿದಾಡುಕೊಂಡಿದ್ದು, ಈ ವೇಳೆ ಸಿಟ್ಟಿಗೆದ್ದ ಕಲ್ಲಪ್ಪ ಬಂದೂಕಿನಿಂದ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.
ಪತ್ನಿಯನ್ನು ಹತ್ಯೆಗೈದ ನಂತರ ತಾನೂ ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಸ್ಥಳೀಯರು ಬಿಡಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.