ಹುಬ್ಬಳ್ಳಿ: ಪತಿ ಸಾವನ್ನಪ್ಪಿದ ಸುದ್ದಿ ತಿಳಿದು ಆಘಾತಗೊಂಡ ಪತ್ನಿಯೂ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕುಂದಗೋಳ ಪಟ್ಟಣದ ಕುಂಬಾರಗಲ್ಲಿಯಲ್ಲಿ ನಡೆದಿದ್ದು, ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಫೆರಿದ್ದೀನ್ ಇಮಾಮಸಾಬ್ ಪಠಾಣ್(74) ಅವರು ಇಂದು ಬೆಳಗ್ಗೆ 6.30ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುಟುಂಬಸ್ಥರು, ಸಂಬಂಧಿಗಳು ಅವರ ಶವ ಸಂಸ್ಕಾರ ಮುಗಿಸಿ ಮನೆಗೆ ಮರಳುವ ಹೊತ್ತಿಗಾಗಲೇ ಅವರ ಪತ್ನಿ ಹುಸೇನಬಿ ಫೆರುದ್ದೀನ್ ಪಠಾಣ್(70) ಪತಿಯ ಸಾವಿನಿಂದ ಆಘಾತಗೊಂಡು ಇಂದು ಸಂಜೆ 4 ಗಂಟೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ.
ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ. ಇಬ್ಬರೂ ಅದೇ ದಿನ ಸಾವನ್ನಪ್ಪಿದ್ದನ್ನು ಕಂಡು ಪಟ್ಟಣದ ಜನರಿಗೆ ಸಹ ನೋವುಂಟಾಗಿದೆ. ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ ಎಂದು ಕುಂದಗೋಳ ಪಟ್ಟಣದ ಜನ ಕಂಬನಿ ಮಿಡಿಯುತ್ತಿದ್ದಾರೆ.