ಮುಂಬೈ: ಬಾಲಿವುಟ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರ ನೀಲಿ ಚಿತ್ರೀಕರಣ ಪ್ರಕರಣದಲ್ಲಿ ಪೊಲೀಸ್ ಬಂಧಿಯಾಗಿದ್ದಾರೆ. ಈ ಕುರಿತಾಗಿ ಶಿಲ್ಪಾ ಶೆಟ್ಟಿ ವಿಚಾರಣೆಗೆ ಒಳಪಟ್ಟಿದ್ದಾರೆ.
ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಶಿಲ್ಪಾ ಶೆಟ್ಟಿ ಅವರ ನಿವಾಸದ ಮೇಲೆ ಶುಕ್ರವಾರ (ಜು.23) ದಾಳಿ ನಡೆಸಿ ತಪಾಸಣೆ ಮಾಡಲಾಗಿದೆ. ಈ ವೇಳೆ ಪತಿಯ ಪರವಾಗಿ ಮಾತನಾಡಿರುವ ಶಿಲ್ಪಾ ಶೆಟ್ಟಿ ಅವರು ರಾಜ್ ಕುಂದ್ರಾ ನಿರಪರಾಧಿ ಎಂದು ವಾದ ಮಾಡಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.
ಅಶ್ಲೀಲ ಸಿನಿಮಾ ಚಿತ್ರೀಕರಣದ ವಿಚಾರದಲ್ಲಿ ತನ್ನ ಸಹಭಾಗಿತ್ವ ಏನೂ ಇಲ್ಲ ರಾಜ್ ಕುಂದ್ರಾ ಅವರ ಹಾಟ್ ಶಾಟ್ಸ್ ಆ್ಯಪ್ ಜೊತೆ ನನಗೆ ಯಾವುದೇ ಸಂಬಂಧ ಇಲ್ಲ. ಅದರಲ್ಲಿ ಯಾವ ರೀತಿ ಕಂಟೆಂಟ್ ಇರುತ್ತದೆ ಎಂಬುದು ಕೂಡ ನನಗೆ ಗೊತ್ತಿಲ್ಲ. ನನ್ನ ಗಂಡ ಮಾಡಿದ್ದು ಕಾಮೋದ್ರೇಕದ ಸಿನಿಮಾಗಳು ಮಾತ್ರ. ಅವುಗಳು ಅಶ್ಲೀಲ ಸಿನಿಮಾಗಳಲ್ಲ. ಹಾಗಾಗಿ ನನ್ನ ಗಂಡ ನಿರಪರಾಧಿ ಎಂದು ಅವರು ವಾದಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ರಾಜ್ ಕುಂದ್ರಾ ಕೂಡ ಪೊಲೀಸರ ಎದುರು ಇದನ್ನೇ ವಾದಿಸುತ್ತಿದ್ದಾರೆ. ಅವರು ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎನ್ನಲಾಗಿದೆ. ಆ ಕಾರಣದಿಂದಲೇ ಜು.27ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ನಟಿಯರನ್ನು ಮತ್ತು ಮಾಡೆಲ್ಗಳನ್ನು ಬಳಸಿಕೊಂಡು ರಾಜ್ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರ ಬಳಿ ಹಲವು ಸಾಕ್ಷ್ಯಗಳು ಇವೆ ಎನ್ನಲಾಗಿದೆ. ಇದನ್ನೂ ಓದಿ: ಕುಟುಂಬ ಸಮೇತರಾಗಿ ಈ ಸಿನಿಮಾ ನೋಡಿ: ಶಿಲ್ಪಾ ಶೆಟ್ಟಿ
ಓಟಿಟಿಯಲ್ಲಿ ಶಿಲ್ಪಾ ಶೆಟ್ಟಿ ನಟನೆಯ ‘ಹಂಗಾಮಾ 2’ ಸಿನಿಮಾ ರಿಲೀಸ್ ಆಗಿದ್ದು, ಒಳ್ಳೆಯ ಚಿತ್ರ ನಿರ್ಮಾಣ ಮಾಡಲು ಕಷ್ಟಪಟ್ಟ ಚಿತ್ರತಂಡಕ್ಕೆ ಸಮಸ್ಯೆ ಆಗಬಾರದು, ಮನೆಯಲ್ಲಿ ಕೂತು ಸಿನಿಮಾ ನೋಡಿ ಎಂದು ಶಿಲ್ಪಾ ಶೆಟ್ಟಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕುವುದರ ಮೂಲಕ ಮನವಿ ಮಾಡಿದ್ದಾರೆ.