ಪತಿ ಅಂದ್ರೆ ಹೀಗಿರಬೇಕು – ಗರ್ಭಿಣಿ ಅನುಷ್ಕಾ ಶೀರ್ಷಾಸನಕ್ಕೆ ಕೊಹ್ಲಿ ಸಹಾಯ

Public TV
2 Min Read
Anushka Sharma kohli

– ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಗೆ ಭಾರೀ ಮೆಚ್ಚುಗೆ

ಮುಂಬೈ: ಗರ್ಭಿಣಿಯಾಗಿರುವ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಶೀರ್ಷಾಸನ ಮಾಡಲು ವಿರಾಟ್ ಕೊಹ್ಲಿ ಸಹಾಯ ಮಾಡಿದ್ದು, ಈಗ ಈ ಫೋಟೋ ವೈರಲ್ ಆಗಿದೆ.

ಇಂದು ಸಾಮಾಜಿಕ ಜಾಲತಾಣದಲ್ಲಿ ಹಳೆಯ ಫೋಟೋವನ್ನು ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಗರ್ಭವತಿಯಾದ ಸಮಯದಲ್ಲೂ ಯೋಗ ಮಾಡುವುದು ಮುಖ್ಯ ಎಂದು ಹೇಳಿದ್ದಾರೆ. ಸದ್ಯ ಈ ಫೋಟೋ ಟ್ವಿಟ್ಟರಿನಲ್ಲಿ ಟ್ರೆಂಡ್ ಆಗಿದ್ದು, ರಕುಲ್ ಪ್ರೀತ್ ಸಿಂಗ್ ಮತ್ತು ಮೌನಿ ರಾಯ್ ಸೇರಿದಂತೆ ಹಲವಾರು ನಟ-ನಟಿಯರು ಅನುಷ್ಕಾ ಫೋಟೋಗೆ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಫೋಟೋವನ್ನು ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಯೋಗ ನನ್ನ ಜೀವನದ ಒಂದು ಭಾಗವಾಗಿದೆ. ನಾನು ಗರ್ಭಿಣಿಯಾಗುವ ಮುಂಚೆ ಮಾಡುತ್ತಿದ್ದ ಎಲ್ಲ ಆಸನಗಳನ್ನು ಉತ್ತಮ ಸಹಾಯದಿಂದ ಮಾಡಲು ವೈದ್ಯರು ಹೇಳಿದ್ದಾರೆ. ನಾನು ಹಲವಾರು ವರ್ಷದಿಂದ ಶೀರ್ಷಾಸನ ಮಾಡುತ್ತಿದ್ದೇನೆ. ಇಂದು ಗೋಡೆಯ ಮತ್ತು ನನ್ನ ಪ್ರೀತಿಯ ಗಂಡನ ಸಹಾಯದಿಂದ ಬ್ಯಾಲೆನ್ಸ್ ಮಾಡುತ್ತಿದ್ದೇನೆ. ಗರ್ಭಿಣಿಯಾದ ಸಮಯದಲ್ಲೂ ನಾನು ಈ ರೀತಿಯ ಅಭ್ಯಾಸ ಮಾಡುತ್ತಿರುವುದಕ್ಕೆ ನನಗೆ ಖುಷಿಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

anushka sharma virat kohli

ಸದ್ಯ ಕೊಹ್ಲಿ ಮತ್ತು ಅನುಷ್ಕಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದಕ್ಕೆ ಕಮೆಂಟ್ ಮಾಡಿರುವ ಹಲವಾರು ಅಭಿಮಾನಿಗಳು ಪತಿ ಎಂದರೆ ಹೀಗಿರಬೇಕು ಎಂದು ಕೊಹ್ಲಿ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ಕೆಲವರು ಕಮೆಂಟ್ ಮಾಡಿ ಇವು ಒಳ್ಳೆಯ ಪತಿಯ ಲಕ್ಷಣ. ಗಂಡ ಎಂದರೆ ಪತ್ನಿಯ ಕಷ್ಟದ ಸಮಯದಲ್ಲೂ ಜೊತೆಯಲ್ಲಿ ನಿಲ್ಲಬೇಕು ಎಂದು ಕೊಹ್ಲಿಯನ್ನು ಹಾಡಿಹೊಗಳಿದ್ದಾರೆ.

AnushkaSharma

ಸದ್ಯ ವಿರಾಟ್ ಕೊಹ್ಲಿಯವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ನಿರತರಾಗಿದ್ದು, ಈಗಾಗಲೇ ಟೀಂ ಇಂಡಿಯಾ ಎರಡು ಏಕದಿನ ಪಂದ್ಯಗಳನ್ನು ಸೋತಿದೆ. ನಾಳೆ ಏಕದಿನ ಸರಣಿಯ ಕೊನೆ ಪಂದ್ಯ ನಡೆಯಲಿದ್ದು, ಕ್ಲೀನ್ ಸ್ವೀಪ್‍ನಿಂದ ತಪ್ಪಿಸಿಕೊಳ್ಳಲು ಕೊಹ್ಲಿ ಪಡೆ ನಾಳೆಯ ಪಂದ್ಯವನ್ನು ಗೆಲ್ಲಬೇಕಿದೆ. ಐಪಿಎಲ್ ಸಮಯದಲ್ಲಿ ಯುಎಇಯಲ್ಲಿದ್ದ ಅನುಷ್ಕಾ ಸದ್ಯ ಮುಂಬೈಗೆ ವಾಪಸ್ ಆಗಿದ್ದು, ಕೆಲ ಜಾಹೀರಾತು ಶೂಟಿಂಗ್‍ನಲ್ಲಿ ತೊಡಗಿಕೊಂಡಿದ್ದಾರೆ. ಜನವರಿ ತಿಂಗಳಿನಲ್ಲಿ ವಿರುಷ್ಕಾ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *