ಕಠ್ಮಂಡು: ಗಂಡದಿರು ಪತ್ನಿಯನ್ನು ಹೆಗಲ ಮೇಲೆ ಹೊತ್ತು ಓಡುವುದು ಸಾಮಾನ್ಯ. ಆದರೆ ನೇಪಾಳದಲ್ಲಿ ಪತ್ನಿಯರು ಗಂಡದಿರನ್ನು ಹೆಗಲ ಮೇಲೆ ಹೊತ್ತುಕೊಂಡು ಓಡುವ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.
ಮಹಿಳಾ ದಿನಾಚರಣೆಯ ಅಂಗವಾಗಿ ದೇವ್ಘಾಟ್ ಗ್ರಾಮವೊಂದರ ಸ್ಥಳೀಯ ಶಾಲೆಯ ಆಡಳಿತ ಮಂಡಳಿ ಆಯೋಜಿಸಿದ್ದ 100 ಮೀ. ಓಡುವ ರೇಸ್ ಸ್ಪರ್ಧೆಯಲ್ಲಿ ವಿವಾಹಿತ ಮಹಿಳೆಯರು ತಮ್ಮ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ವಯೋಮಾನದ 16 ಜೋಡಿಗಳು ಭಾಗವಹಿಸಿದ್ದರು.
ಈ ಸುದ್ದಿ ಹಬ್ಬುತ್ತಿದಂತೆಯೇ ರಾಜಧಾನಿ ಕಠ್ಮಂಡುವಿನಿಂದ 150 ಕಿಲೋ ಮೀಟರ್ ದೂರದಲ್ಲಿರುವ ಶಾಲೆಯ ಮೈದಾನಕ್ಕೆ ಪಂದ್ಯ ವೀಕ್ಷಿಸಲು ಹಳ್ಳಿಯ ಸುತ್ತಮುತ್ತಲಿನ ಜನರು ಗುಂಪು ಗುಂಪಾಗಿ ಸೇರಿದ್ದರು. ಅಲ್ಲದೆ ಪಂದ್ಯದಲ್ಲಿ ಭಾಗವಹಿಸಿದ ಪ್ರತಿ ದಂಪತಿಗೂ ಪ್ರಮಾಣಪತ್ರ ನೀಡಿ ಶ್ಲಾಘಿಸಲಾಯಿತು.
ಪಂದ್ಯದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಾನು ತುಂಬಾ ಧೈರ್ಯ ಮಾಡಿ ಬಂದಿದ್ದೆ. ನಾನು ಸ್ಪರ್ಧೆಯಲ್ಲಿ ಉತ್ತಮ ಸ್ಥಾನ ಪಡೆಯದೇ ಇದ್ದರೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಮತ್ತು ಗೌರವ ನೀಡುತ್ತಿರುವುದಕ್ಕೆ ನನಗೆ ಬಹಳ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.