ಹೈದರಾಬಾದ್: ಪತಿಯನ್ನು ಮನೆಯೊಳಗಡೆ ಲಾಕ್ ಮಾಡಿ ತನ್ನ 8 ತಿಂಗಳ ಹೆಣ್ಣು ಮಗುವಿನೊಂದಿಗೆ ಮಹಿಳೆಯೊಬ್ಬರು ಬಹುಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಮಹಿಳೆಯನ್ನು ಅನಿತಾ(24) ಎಂದು ಗುರುತಿಸಲಾಗಿದೆ. ಬಿಹಾರ ಮೂಲದವರಾಗಿರುವ ಅನಿತಾ, ಬಿಸ್ಮಲ್ ಸಿಂಗ್ ಎಂಬವರನ್ನು ವರಿಸಿದ್ದು, ಈ ದಂಪತಿಗೆ 8 ತಿಂಗಳ ಹೆಣ್ಣು ಮಗುವೊಂದಿದೆ. ಈ ಕುಟುಂಬ ಹೈದರಾಬಾದ್ ನ ಬಂಜಾರಾ ಹಿಲ್ಸ್ ಶ್ರೀರಾಮ್ ನಗರ ಕಾಲೋನಿಯಲ್ಲಿ ಕಳೆದ ಮೂರು ತಿಂಗಳಿನಿಂದ ವಾಸವಾಗಿದೆ.
ಕುಟುಂಬದಲ್ಲಾಗುತ್ತಿರುವ ಪ್ರತಿನಿತ್ಯದ ಸಮಸ್ಯೆಗಳಿಂದ ಬೇಸತ್ತು ಮಹಿಳೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದಂಪತಿ ದಿನನಿತ್ಯ ಜಗಳವಾಡುತ್ತಿದ್ದರು. ಈ ಮಧ್ಯೆ ಸಂಬಂಧಿಕರು ಇಬ್ಬರಲ್ಲಿರುವ ವೈಮನಸ್ಸನ್ನು ಸರಿದೂಗಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ.
ಅಂತೆಯೇ ಸೋಮವಾರ ಪತಿ ಹಾಗೂ ಪತ್ನಿಯ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿದ್ದು, ಅನಿತಾ ತನ್ನ ಪತಿಯನ್ನು ಮನೆಯೊಳಗಡೆ ಲಾಕ್ ಮಾಡಿ ಮಗುವಿನೊಂದಿಗೆ ಕಟ್ಟಡದ ಎರಡನೇ ಮಹಡಿಯ ಬಾಲ್ಕನಿಯಿಂದ ಕೆಳಕ್ಕೆ ಜಿಗಿದಿದ್ದಾಳೆ. ಪರಿಣಾಮ ಅನಿತಾ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಪುಟ್ಟ ಕಂದಮ್ಮನ ಸ್ಥಿತಿ ಗಂಭೀರವಾಗಿದೆ.
ಅನಿತಾ ಹಾರಿದ್ದನ್ನು ಕಂಡ ಸ್ಥಳೀಯರು ಕೂಡಲೇ ಸ್ಥಳಕ್ಕೆ ದೌಡಾಯಿಸಿ, ಇಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅನಿತಾ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ಬಂಜಾರಾ ಹಿಲ್ಸ್ ಸಬ್-ಇನ್ಸ್ ಪೆಕ್ಟರ್ ಕೆ. ಉದಯ್ ಹೇಳಿದ್ದಾರೆ.