ದಾವಣಗೆರೆ: ಮದ್ಯ ಸೇವಿಸಲು ಹಣಕ್ಕಾಗಿ ಪೀಡಿಸುತ್ತಿದ್ದ ಪತಿಯನ್ನು ಕೊಲೆ ಮಾಡಿ ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿದ್ದಾ ಪತ್ನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಅರುಂಡಿ ಗ್ರಾಮದ ವಾಸಿ ಶ್ರೀಮತಿ ರೇಣುಕಾ (29) ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾಳೆ. ಪತಿ ಬಂಗಿ ನರಸಿಂಹಪ್ಪ ಹತ್ಯೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗೀತಾ ಕೆಬಿ ಜೀವಾವಧಿ ಶಿಕ್ಷೆ ಸಹಿತ 15 ಸಾವಿರ ದಂಡವನ್ನು ವಿಧಿಸಿತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಭಿಯೋಜಕರಾದ ಎಸ್.ವಿ.ಪಾಟೀಲ್ ವಾದ ಮಂಡಿಸಿದ್ದರು.
ಏನಿದು ಪ್ರಕರಣ?
ಮೃತ ಬಂಗಿ ನರಸಿಂಹಪ್ಪ ಯಾವುದೇ ಕೆಲಸವನ್ನು ಮಾಡುತ್ತಿರಲಿಲ್ಲ. ಪ್ರತಿ ದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಇದಲ್ಲದೆ ಪ್ರತಿ ದಿನ ಕುಡಿಯಲು ಹಣ ಕೊಡುವಂತೆ ತನ್ನ ಹೆಂಡತಿ ರೇಣುಕಾಳಿಗೆ ಪೀಡಿಸುತ್ತಿದ್ದನು. ಪತ್ನಿ ರೇಣುಕಾ ಹಣ ಕೊಡದೇ ಇದ್ದಲ್ಲಿ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದನು. ಇದರಿಂದ ರೋಸಿ ಹೋದ ಪತ್ನಿ ರೇಣುಕಾ ಹಿಂಸೆಯಿಂದ ಪಾರಾಗಲು ತನ್ನ ಗಂಡನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದಳು.
2018 ಏಪ್ರಿಲ್ 8ರಂದು ಬಂಗಿನರಸಿಂಹಪ್ಪನು ಕುಡಿದು ಬಂದು ಹಣ ಕೊಡುವಂತೆ ಮತ್ತೆ ಪೀಡಿಸಿದ್ದಾನೆ. ಇದರಿಂದ ಕೋಪಗೊಂಡ ರೇಣುಕಾ ಶೌಚಾಲಯದ ಕೋಣೆಯೊಳಗೆ ಎಳೆದುಕೊಂಡು ಹೋಗಿ ಕಬ್ಬಿಣದ ಕುಡುಗೋಲಿನಿಂದ ಕುತ್ತಿಗೆಯನ್ನು ಕೊಯ್ದು ಸಾಯಿಸಿ ತಾನೇ ಕೊಲೆ ಮಾಡಿರುವುದು ಯಾರಿಗೂ ತಿಳಿಯಬಾರದೆಂದು ಹೆಣವನ್ನು ಅಲ್ಲೇ ಪಕ್ಕದಲ್ಲಿರುವ ಶೌಚಾಲಯದ ಗುಂಡಿಯೊಳಗೆ ಹಾಕಿದ್ದಳು. ಪ್ರಕರಣ ದಾಖಲಿಸಿದ ನ್ಯಾಮತಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದರು.