ಪತಿಯನ್ನು ಕೊಂದ ಕೊಲೆಗಾರ್ತಿಯಿಂದ ಉಡುಪಿಯಲ್ಲಿ ಮಾಂಸ ದಂಧೆ

Public TV
1 Min Read
rajeshwari shetty 12

– ಪೊಲೀಸ್ ದಾಳಿಯಾಗುತ್ತಿದ್ದಂತೆ ರಾಜೇಶ್ವರಿ ಶೆಟ್ಟಿ ಪರಾರಿ

 ಉಡುಪಿ: ಪತಿ ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಕೊಂದು, ಕತ್ತರಿಸಿ ಹೋಮಕುಂಡದಲ್ಲಿ ಸುಟ್ಟಿದ್ದ ಆರೋಪಿ ರಾಜೇಶ್ವರಿ ಶೆಟ್ಟಿ ತನ್ನ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ದಂಧೆ ಶುರುಮಾಡಿದ್ದಾಳೆ. ತಿಂಗಳೊಳಗೆ ಎರಡನೇ ಬಾರಿಗೆ ಸಿಕ್ಕಿಬಿದ್ದು ಇದೀಗ ಪರಾರಿಯಾಗಿದ್ದಾಳೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಮಿ ಭಾಸ್ಕರ ಶೆಟ್ಟಿ ಮರ್ಡರ್ ಕೇಸ್ ಇಡೀ ದೇಶದ ಗಮನ ಸೆಳೆದಿತ್ತು. ಅರಬ್ ರಾಷ್ಟ್ರಗಳಲ್ಲಿ ಈ ಪ್ರಕರಣ ಚರ್ಚೆಯಾಗಿತ್ತು. ಹೋಮಕುಂಡ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿರುವ ಆರೋಪಿ ರಾಜೇಶ್ವರಿ ಶೆಟ್ಟಿ ಮತ್ತೆ ಸಿಕ್ಕಿಬಿದ್ದಿದ್ದಾಳೆ. ತನ್ನ ಹೋಟೆಲ್ ಕಂ ಲಾಡ್ಜಿಂಗ್ ನಲ್ಲಿ ವೇಶ್ಯಾವಾಟಿಕೆ ನಡೆಸಿ ಪೊಲೀಸ್ ದಾಳಿಗೊಳಗಾಗಿ ತಲೆಮರೆಸಿಕೊಂಡಿದ್ದಾಳೆ.

rajeshwari shetty hotel

ತನ್ನ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದ ಉದ್ಯಮಿ ಭಾಸ್ಕರ ಶೆಟ್ಟಿ ಅವರನ್ನು ತನ್ನ ಪುತ್ರ ಮತ್ತು ಪ್ರಿಯಕರನ ಸಹಾಯದಿಂದ ಕೊಂದು ಶವವನ್ನು ಹೋಮಕುಂಡದಲ್ಲಿ ಹಾಕಿ ಈಕೆ ಸುಟ್ಟಿದ್ದರು, ಈ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಗಿರುವ ರಾಜೇಶ್ವರಿ ಶೆಟ್ಟಿ ಮಾಂಸ ದಂಧೆ ಶುರುಮಾಡಿದ್ದಾಳೆ.

ಉಡುಪಿ ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ಹೋಟೆಲ್ ದುರ್ಗಾ ಇಂಟರ್ನ್ಯಾಷನಲ್ ನಲ್ಲಿ ಅಕ್ರಮ ಚಟುವಟಿಕೆಗೆ ಆಶ್ರಯ ನೀಡಿದ್ದಾಳೆ. ಡಿಸಿಐಬಿ ಪೊಲೀಸರು ನಡೆಸಿರುವ ದಾಳಿಯಲ್ಲಿ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದ್ದು, ವೇಶ್ಯಾವಾಟಿಕೆಗೆ ಆಶ್ರಯ ನೀಡಿದ ಆರೋಪದಲ್ಲಿ ರಾಜೇಶ್ವರಿ ಮತ್ತು ಇತರ ಮೂವರ ಮೇಲೆ ಪ್ರಕರಣ ದಾಖಲಾಗಿದೆ. ಪೊಲೀಸರ ಕಾರ್ಯಾಚರಣೆಯಲ್ಲಿ ಮೂವರ ಬಂಧನವಾಗಿದ್ದು, ರಾಜೇಶ್ವರಿ ಯ ಬಂಧನ ಇನ್ನೂ ಆಗಿಲ್ಲ.

Bhaskar Shetty 1 newsk 59

ವಿದೇಶದಲ್ಲಿ ಉದ್ಯಮ ನಡೆಸುತ್ತಿದ್ದ ಭಾಸ್ಕರ ಶೆಟ್ಟಿಯನ್ನು 2016ರ ಜುಲೈ 28ರಂದು ಹತ್ಯೆ ಮಾಡಲಾಗಿತ್ತು. ಪ್ರಿಯಕರ ನಿರಂಜನ ಭಟ್, ಪುತ್ರ ನವನೀತ ಶೆಟ್ಟಿ ಜೊತೆ ಸೇರಿ ರಾಜೇಶ್ವರಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಳು. 2018ರ ಏಪ್ರಿಲ್ ತಿಂಗಳಲ್ಲಿ ಈಕೆಗೆ ಜಾಮೀನು ಕೂಡ ನೀಡಲಾಗಿತ್ತು. ಜಾಮೀನು ಪಡೆದು ಹೊರಬಂದ ನಂತರ ಪತಿಯು ನಡೆಸುತ್ತಿದ್ದ ಉದ್ಯಮವನ್ನು ರಾಜೇಶ್ವರಿ ಶೆಟ್ಟಿ ನೋಡಿಕೊಳ್ಳುತ್ತಿದ್ದಳು. ಈ ಪ್ರಕರಣದ ಮತ್ತಿಬ್ಬರು ಪ್ರಮುಖ ಆರೋಪಿಗಳಾದ ನಿರಂಜನ ಭಟ್ ಮತ್ತು ನವನೀತ್ ಇಂದಿಗೂ ಜೈಲುವಾಸ ಅನುಭವಿಸುತ್ತಿದ್ದಾರೆ.

Share This Article