– ಪ್ರೀತಿಸಿ ಮದ್ವೆಯಾಗಿದ್ದ ಗಂಡನ ಮೇಲೆ ಮುನಿಸು
ಕೋಲಾರ: ಪತಿಗೆ ತಂದೆ ತಾಯಿಯ ಮೇಲೆಯೇ ಪ್ರೀತಿ, ತನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾನೆ ಎಂದು ಮಹಿಳೆಯೊಬ್ಬಳು ತನ್ನ ಮಗುವನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಬಾಲಮುರಗನ್ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಸಾಯಿ ಸಿಂಧು (27) ತನ್ನ 4 ವರ್ಷದ ಮಗಳು ಕಿರಣ್ಯ ಶ್ರೀಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ಸಾಯಿ ಸಿಂಧು ಕಳೆದ 6 ವರ್ಷದ ಹಿಂದೆ ಬಾಲಮುರಗನ್ ದೇವಸ್ಥಾನದ ಅರ್ಚಕ ಸರವಣನನ್ನ ಪ್ರೀತಿಸಿ ಮದುವೆಯಾಗಿದ್ದಳು. ಸಾಯಿ ಸಿಂಧು ಬಿ.ಇ ಪದವೀಧರೆಯಾಗಿದ್ದು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಮುಂಗೋಪಿಯಾಗಿರುವ ಸಿಂಧು ತನ್ನ ಪತಿಯೊಂದಿಗೆ ಅತ್ತೆ ಮಾವನ ವಿಚಾರದಲ್ಲಿ, ಗಂಡ ನನ್ನ ಮತ್ತು ಮಗಳನ್ನ ನಿರ್ಲಕ್ಷ್ಯ ಮಾಡುತ್ತಿದ್ದಾನೆಂದುಕೊಂಡು ಪದೇ ಪದೇ ಜಗಳವಾಡುತ್ತಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ.
ಸರವಣ ತಂದೆ ತಾಯಿ ಕೂಡ ಇಬ್ಬರ ಪ್ರೀತಿಯನ್ನ ಒಪ್ಪಿಕೊಂಡು ಜೊತೆಯಾಗಿದ್ದರು. ಆದರೆ ಇತ್ತೀಚೆಗೆ ಸರವಣ ತಾಯಿಗೆ ಕಿಡ್ನಿ ವೈಫಲ್ಯವಾಗಿದ್ದು, ವೈದ್ಯರು 20 ಲಕ್ಷ ಹಣ ಹೊಂದಿಸಿಕೊಳ್ಳುವಂತೆ ತಿಳಿಸಿದ್ದರು. ಆದ್ದರಿಂದ ಸರವಣ ತನ್ನ ಅಮರಾವತಿ ಬಡವಾಣೆಯಲ್ಲಿರುವ ನಿವೇಶನವನ್ನ 40 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ನಂತರ ತನ್ನ ಅನಾರೋಗ್ಯಪೀಡಿತ ತಂದೆ ತಾಯಿಯನ್ನ ಚಿಕಿತ್ಸೆಗಾಗಿ ತಮಿಳುನಾಡಿನ ಪಳನಿಗೆ ಬಿಟ್ಟು ಬರಲು ಹೋಗಿದ್ದನು.
ಇದಕ್ಕೂ ಮೊದಲು ಸಾಯಿ ಸಿಂಧು ಪತಿಯೊಂದಿಗೆ ತವರು ಮನೆಗೆ ಹೋಗಿದ್ದು, ತನ್ನ ಬಳಿ ಇರುವ ಆಭರಣಗಳನ್ನ ಕೊಟ್ಟು ಬಂದಿದ್ದಳು. ಜೊತೆಗೆ ಫೇಸ್‍ಬುಕ್ ಅಕೌಂಟ್ ಕೂಡ ಬ್ಲಾಕ್ ಮಾಡಿದ್ದಾಳೆ. ನಂತರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗಳನ್ನ ಕೊಲೆ ಮಾಡಿದ ಬಳಿಕ ಹಾಲ್‍ನಲ್ಲಿ ನೇಣಿಗೆ ಶರಣಾಗಿದ್ದಾಳೆ.
ಮಾಹಿತಿ ತಿಳಿದು ಸ್ಥಳಕ್ಕೆ ಕೆಜಿಎಫ್ ಎಸ್‍ಪಿ ಇಲಕ್ಕಿಯಾ ಕರುಣಾಗರನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.