ಪತನದತ್ತ ರಾಜಸ್ಥಾನ ಕೈ ಸರ್ಕಾರ – ಇಂದು ನಡ್ಡಾ ಜೊತೆ ಪೈಲಟ್‌ ಭೇಟಿ?

Public TV
3 Min Read
Rajasthan Congress Sachin Pilot Ashok Gehlot 7

– ಕೈ ಶಾಸಕರಿಗೆ ವಿಪ್‌ ಜಾರಿ
– ಪೈಲಟ್‌ಗೆ 30 ಶಾಸಕರ ಬೆಂಬಲ
– ಸಚಿನ್ ನಡೆಯನ್ನು ಸ್ವಾಗತಿಸಿದ ಸಿಂಧಿಯಾ, ಸುಧಾಕರ್‌

ನವದೆಹಲಿ: ಪಕ್ಷದ ನಾಯಕರ ವಿರುದ್ಧವೇ ಬಂಡಾಯ ಸಾರಿರುವ ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಸಂಪರ್ಕಿಸಿ ಕಮಲ ಪಕ್ಷ ಸೇರುವ ಸಾಧ್ಯತೆಯಿದೆ.

ಈಗಾಗಲೇ 30ಕ್ಕೂ ಹೆಚ್ಚು ಶಾಸಕರ ಬೆಂಬಲ ಪಡೆದು ದೆಹಲಿ ರೆಸಾರ್ಟ್‌ನಲ್ಲಿರುವ ಸಚಿನ್‌ ಪೈಲಟ್‌ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ 30 ಮಂದಿ ಬೆಂಬಲ ಇದ್ದರೂ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಇಂದು ಪಕ್ಷದ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ. ಬೆಳಗ್ಗೆ ನಡೆಯಲಿರುವ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ವಿಪ್‌ ಜಾರಿ ಮಾಡಿದ್ದು, ಗೈರಾದ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜಸ್ಥಾನ ಕಾಂಗ್ರೆಸ್‌ ಉಸ್ತುವಾರಿ ಅವಿನಾಶ್‌ ಪಾಂಡೆ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ 109 ಶಾಸಕರು ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಸಹಿ ಹಾಕಿದ್ದಾರೆ. ಸಿಎಂ ಅಶೋಕ್‌ ಗೆಹ್ಲೋಟ್‌, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದಾರೆ. ಅಷ್ಟೇ ಅಲ್ಲದೇ ಕೆಲ ಶಾಸಕರು ದೂರವಾಣಿಯ ಮೂಲಕವೂ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ ಎಂಬುದಾಗಿ ತಿಳಿಸಿದ್ದಾರೆ ಎಂದು ಅವಿನಾಶ್‌ ಪಾಂಡೆ ಹೇಳಿದ್ದಾರೆ.

Rajasthan Congress Sachin Pilot Ashok Gehlot 2

ಬಲಾಬಲ ಹೇಗಿದೆ?
ಒಟ್ಟು 200 ಸದಸ್ಯರನ್ನು ಹೊಂದಿರುವ ವಿಧಾನಸಣೆಯಲ್ಲಿ ಕಾಂಗ್ರೆಸ್‌ 107 ಶಾಸಕರನ್ನು ಹೊಂದಿದ್ದರೆ, ಬಿಜೆಪಿ 72 ಶಾಸಕರನ್ನು ಹೊಂದಿದೆ. ರಾಷ್ಟ್ರೀಯ ಲೋಕ ತಾಂತ್ರಿಕ ಪಕ್ಷದ 3, ಭಾರತೀಯ ಬುಡಕಟ್ಟು ಪಕ್ಷ, ಕಮ್ಯೂನಿಸ್ಟ್‌ ಪಕ್ಷ ತಲಾ 2, ರಾಷ್ಟ್ರೀಯ ಲೋಕದಳದ ಒಬ್ಬ ಶಾಸಕರಿದ್ದಾರೆ.

ಮಾಧ್ಯಮಗಳಲ್ಲಿ ವರದಿಯಾದಂತೆ 30 ಶಾಸಕರು ಸಚಿನ್‌ ಪೈಲಟ್‌ ಪರ ಇದ್ದಾರೆ. ಇಷ್ಟು ಸಂಖ್ಯೆಯ ಶಾಸಕರು ರಾಜೀನಾಮೆ ನೀಡಿದರೆ ಸದನದ ಬಲ 170ಕ್ಕೆ ಕುಸಿಯಲಿದೆ. ಆಗ ಬಹುತಕ್ಕೆ 86 ಶಾಸಕರ ಬೆಂಬಲ ಬೇಕಾಗುತ್ತದೆ. ಬಿಜೆಪಿ ಪಕ್ಷೇತರರು ಮತ್ತು ಇತರರ ನೆರವು ಪಡೆದು ಅಧಿಕಾರಕ್ಕೆ ಏರಬಹುದು ಎಂಬ ಲೆಕ್ಕಾಚಾರ ಈಗ ಕೇಳಿಬಂದಿದೆ.

75 ಶಾಸಕರು ಭಾಗಿ:
ಸರ್ಕಾರ ಉಳಿಸುವ ಸಂಬಂಧ ಭಾನುವಾರ ಸಿಎಂ ಅಶೋಕ್‌ ಗೆಹ್ಲೋಟ್‌ ನಿವಾಸದಲ್ಲಿ ನಡೆದ ಶಾಸಕರ ಸಭೆಯಲ್ಲಿ ಸುಮಾರು 75 ಶಾಸಕರು ಹಾಜರಾಗಿದ್ದರು. ಸರ್ಕಾರವನ್ನು ಉಳಿಸುವ ನಿಟ್ಟಿನಲ್ಲಿ‌ ಹಿರಿಯ ನಾಯಕರಾದ ಅಜಯ್ ಮಕೇನ್ ಮತ್ತು ರಣದೀಪ್ ಸುರ್ಜೆವಾಲಾ‌ ಈಗಾಗಲೇ ರಾಜಸ್ಥಾನಕ್ಕೆ ಬಂದಿದ್ದಾರೆ.

ಮಧ್ಯಪ್ರದೇಶ ಕಾಂಗ್ರೆಸ್‌ ಸರ್ಕಾರ ಪತನಗೊಳ್ಳಲು ಕಾರಣವಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಚಿನ್‌ ಪೈಲಟ್‌ ಅವರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದಾರೆ.

ಕರ್ನಾಟಕದ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಅವರು ಟ್ವೀಟ್‌ ಮಾಡಿ, ಕಾಂಗ್ರೆಸ್‌ ಪಕ್ಷದಲ್ಲಿ ಪ್ರತಿಭೆ ಮತ್ತು ನಾಯಕತ್ವಕ್ಕೆ ಬೆಲೆ ಇಲ್ಲ. ನಾನು ವೈಯಕ್ತಿಕವಾಗಿ ಸಚಿನ್‌ ಪೈಲಟ್‌ ಬಿಜೆಪಿಗೆ ಸೇರ್ಪಡೆಯಾಗುವುದನ್ನು ಸ್ವಾಗತಿಸುತ್ತೇನೆ. ಬಿಜೆಪಿ ಒಂದೇ ಎಲ್ಲ ನಾಯಕರಿಗೆ ಬೆಲೆ ನೀಡುತ್ತದೆ ಎಂದು ತಿಳಿಸಿದ್ದಾರೆ.

ಮಾಜಿ ಹಣಕಾಸು ಸಚಿವ ಚಿದಂಬರಂ ಪುತ್ರ ಕಾರ್ತಿ ಅವರು ಟ್ವೀಟ್‌ ಮಾಡಿ, ಗೂಗಲ್‌ ಕಂಪನಿ ಯಶಸ್ವಿ ಕಂಪನಿಯಾಗಿ ರೂಪುಗೊಂಡಿದ್ದು ಹೇಗೆ ? ಯಾಕೆಂದರೆ ಕಂಪನಿಯ ಒಳಗಡೆ ಇರುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಈ ಪಾಠವನ್ನು ನಾವು ಕಲಿಯಬೇಕು ಎಂದು ಬರೆದುಕೊಂಡಿದ್ದಾರೆ.

ಭಾನುವಾರ ರಾಜಸ್ಥಾನ ಸರ್ಕಾರದಲ್ಲಿನ ಭಿನ್ನಮತದ ಬಗ್ಗೆ ಹಿರಿಯ ನಾಯಕ ಕಪಿಲ್ ಸಿಬಲ್‌ ಬೇಸರದ ಟ್ವೀಟ್ ಮಾಡಿದ್ದರು. ನಮ್ಮ ಪಕ್ಷದ ಬಗ್ಗೆ ನನಗೆ ಆತಂಕವಾಗುತ್ತಿದೆ. ನಮ್ಮ ಲಾಯಗಳಿಂದ(ಕುದುರೆಗಳನ್ನು ಕಟ್ಟಿ ಹಾಕುವ ಜಾಗ) ಕುದುರೆಗಳು ಹೊರ ಬಂದ ನಂತರ ನಾವು ಎಚ್ಚೆತ್ತುಕೊಳ್ಳುವುದೇ ಎಂದು ಪ್ರಶ್ನಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *