– ಫ್ರೀಡಂಪಾರ್ಕ್‍ನಲ್ಲಿ ಉಪವಾಸ ಸತ್ಯಾಗ್ರಹ
ಬೆಂಗಳೂರು: ಸರ್ಕಾರ ಮತ್ತು ಸಾರಿಗೆ ನೌಕರರ ಹಗ್ಗ ಜಗ್ಗಾಟ ನಿಲ್ಲೂ ಲಕ್ಷಣ ಕಾಣ್ತಿಲ್ಲ. ನಾ ಕೊಡೆ ನೀ ಬಿಡೇ ಅಂತ ಇಬ್ಬರು ಜಿದ್ದಿಗೆ ಬಿದ್ದಿದ್ದಾರೆ. ಇವರಿಬ್ಬರ ಮಧ್ಯೆ ಸಿಲುಕಿರುವ ಜನರು ಪಡಬಾರದ ಪಾಡು ಪಡ್ತಿದ್ದಾರೆ.
ಹೌದು. ಪ್ರಯಾಣಿಕರೇ 3ನೇ ದಿನವಾದ ಇಂದು ಕೂಡ ಬಸ್ ಇಲ್ಲ. ಹೀಗಾಗಿ ವೀಕೆಂಡ್ ಅಂತ ಮನೆಯಿಂದ ಹೊರ ಬರೋ ಮುನ್ನ ಯೋಚಿಸಿ. ಒಂದು ವೇಳೆ ಬಸ್ ಇರುತ್ತೆ ಅಂತ ಬಂದ್ರೆ ನಿಲ್ದಾಣದಲ್ಲೇ ಲಾಕ್ ಆಗಬೇಕಾಗುತ್ತೆ. ಶುಕ್ರವಾರ ಹಾಗೂ ಶನಿವಾರ ಪಟ್ಟ ಪರದಾಟವನ್ನ ಇಂದು ಕೂಡ ಅನುಭವಿಸಬೇಕಾಗುತ್ತೆ. ಯಾಕಂದ್ರೆ ಸರ್ಕಾರ ಹಾಗೂ ಸಾರಿಗೆ ನೌಕರರ ಹಗ್ಗ ಜಗ್ಗಾಟ ಇನ್ನೂ ಮುಗಿದಿಲ್ಲ. ಸಾರಿಗೆ ನೌಕರರು ಪಟ್ಟು ಸಡಿಲಿಸ್ತಿಲ್ಲ. ಸರ್ಕಾರ ಹಠ ಬಿಡ್ತಿಲ್ಲ. ಪರಿಣಾಮ ಸಾರಿಗೆ ನೌಕರರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಇದುವರೆಗೆ ಬರೀ ಮುಷ್ಕರ ಪ್ರತಿಭಟನೆಗಳನ್ನ ನೋಡಿದ್ರಿ. ಆದರೆ ಇಂದಿನಿಂದ ಉಪವಾಸ ಸತ್ಯಾಗ್ರಹ ಮಾಡ್ತಾರಂತೆ. ಬೆಂಗಳೂರಿನ ಮೌರ್ಯ ಸರ್ಕಲ್‍ನ ಗಾಂಧಿ ಪ್ರತಿಮೆ ಬಳಿ ಧರಣಿ ಕುಳಿತು ಎಲ್ಲಾ ಡಿಪೋಗಳಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಾರೆ. ಹೀಗಾಗಿ ಇಂದು ಕೂಡ ಬಸ್ಸುಗಳನ್ನು ರೋಡಿಗಿಳಿಸಲ್ಲ. ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ಬಿಎಂಟಿಸಿ ಎಂಡಿ ಶಿಖಾ ಎಚ್ಚರಿಕೆ ಕೊಟ್ಟಿದ್ದಾರೆ. ಪ್ರತಿಭಟನೆ ಹೀಗೆ ಮುಂದುವರಿದ್ರೆ ಎಸ್ಮಾ ಜಾರಿ ಮಾಡಬೇಕಾಗುತ್ತೆ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಇದಕ್ಕೆ ಸಾರಿಗೆ ನೌಕರರು ಸಿಡಿದೆದ್ದಿದ್ದಾರೆ. ಒಂದು ವೇಳೆ ಎಸ್ಮಾ ಜಾರಿ ಮಾಡಿದ್ರೆ ಅವರು ಭಸ್ಮ ಆಗ್ತಾರೆ ಎಂದಿದ್ದಾರೆ.
ಇಂದು ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ ಇರೋದ್ರಿಂದ ಪೊಲೀಸರು ಹೆಚ್ಚಿನ ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಇನ್ನೂ ನಿನ್ನೆ ರಾಜ್ಯಾದ್ಯಂತ ಬಸ್ ಬಂದ್ ಆಗಿತ್ತು. ಬಸ್ ಇಲ್ಲದೇ ಲಕ್ಷಾಂತರ ಪ್ರಯಾಣಿಕರು ಪರದಾಡಿಹೋದ್ರು. ಬಸ್ ನಿಲ್ದಾಣಗಳು ಬಿಕೋ ಅಂತಿದ್ವು. ಸಾರಿಗೆ ನೌಕರರು ನಾನಾ ರೀತಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಕೆಲವೆಡೆ ಬಸ್‍ಗಳ ಮೇಲೆ ಇವತ್ತು ಕೂಡ ಕಲ್ಲು ತೂರಾಟ ನಡೆದಿದೆ. ನಿನ್ನೆಯಿಂದ ಒಟ್ಟು 39 ಬಸ್‍ಗಳು ಜಖಂ ಆಗಿವೆ.
ಪೊಲೀಸರು ಇದುವರೆಗೆ 10 ಮಂದಿ ಸಾರಿಗೆ ನೌಕರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸಾರಿಗೆ ಸಚಿವರಲ್ಲಿ ಒಬ್ರೂ ಉದ್ಧಾರ ಆಗಿಲ್ಲ. ಎಲ್ಲರೂ ಮೂಲೆಗುಂಪಾಗಿದ್ದಾರೆ. ನಮ್ಮೊಂದಿಗೆ ಮಾತುಕತೆಗೆ ಬಾರದ ಲಕ್ಷ್ಮಣ ಸವದಿ ಕೂಡ ಮೂಲೆಗುಂಪಾಗ್ತಾರೆ ಎಂದು ಮುಷ್ಕರ ನಿರತರು ಹಿಡಿಶಾಪ ಹಾಕಿದ್ರು. ವಿಪಕ್ಷದಲ್ಲಿದ್ದಾಗ ಬಿಜೆಪಿಯವರೇ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಅಂತು ಪತ್ರ ಬರೆದಿದ್ರು. ಆದ್ರೆ ಈಗ ನೋಡಿದ್ರೆ ನೀವೇ ಆಗಲ್ಲ ಅಂತಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ರು. ಕೈಮುಗಿದು ಕೇಳ್ಕೋತಿವಿ. ದಯವಿಟ್ಟು ನಮ್ಮ ಬೇಡಿಕೆ ಈಡೇರಿಸಿ ಎಂಬ ಮನವಿ ಕೂಡ ಮಾಡಿಕೊಂಡಿದ್ದಾರೆ. ನಿನ್ನೆಯಿಂದ ಸಾರಿಗೆ ನಿಗಮಗಳಿಗೆ 10 ಕೋಟಿ ಲಾಸ್ ಆಗಿದೆ. 10,700 ಬಸ್‍ಗಳು ನಿಂತಲ್ಲೇ ನಿಂತಿವೆ.