ಮಡಿಕೇರಿ: ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ ಬೇಟೆಯಾಡಿದ ನುರಿತ ಬೇಟೆಗಾರರನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ವಲಯ ಅರಣ್ಯಾಧಿಕಾರಿ ಹೆಚ್.ಜಿ. ದೇವರಾಜು ಮಾರ್ಗದರ್ಶನದಲ್ಲಿ ಖಚಿತ ಸುಳಿವಿನ ಮೇರೆಗೆ ದಾಳಿ ಮಾಡಿದ ಸಿಬ್ಬಂದಿ ಕೆ.ಬಿ. ಉಮೇಶ್, ಪಿ.ಬಿ ರಾಮಕೃಷ್ಣ, ಕೆ.ಬಿ. ರವೀಂದ್ರ, ಕೆ.ಬಿ. ಸುರೇಶ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಳಿವಿನಂಚಿನಲ್ಲಿರುವ ಕೆಂದಳಿಲು ಮತ್ತು ಕಬ್ಬೆಕ್ಕು ಪ್ರಾಣಿಗಳ ಮಾಂಸ ಹಾಗೂ ಸುಬ್ರಮಣ್ಯ ಎಂಬವರ ಪರವಾನಿಗೆ ರಹಿತ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 2(1), (16) (20), (35), (37), 9, 31, 39, 50, 51,59 ಪ್ರಕಾರ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಬಂಧಿತನಾಗಿರುವ ರಾಮಕೃಷ್ಣ ಈ ಹಿಂದೆ ಸಿಂಗಳಿಕ ಬೇಟೆಯಾಡಿದ ಪ್ರಕರಣದಡಿಯಲ್ಲಿ ಸಿಲುಕಿ ನ್ಯಾಯಾಂಗ ಬಂಧನದಲ್ಲಿದ್ದು ಹೊರಬಂದಿದ್ದ ಎನ್ನಲಾಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಮಾರಾಮಾರಿ – ಓರ್ವನಿಗೆ ಗಾಯ