ಧಾರವಾಡ: ಪಟಾಕಿ ಸಾಗಿಸುತ್ತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ, ಲಾರಿಯಿಂದ ಹೊರಬಿದ್ದ ಪಟಾಕಿ ಬಾಕ್ಸ್ ಕೆಲಹೊತ್ತು ಜನರಲ್ಲಿ ಆತಂಕ ಸೃಷ್ಟಿಸಿದ್ದ ಘಟನೆ ಧಾರವಾಡ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಧಾರವಾಡ ಬೈಪಾಸ್‍ನ ಇಟ್ಟಿಗಟ್ಟಿ ಬಳಿ 2 ಲಾರಿಗಳ ನಡುವೆ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಪಟಾಕಿ ಹಾರದಂತೆ ಎಚ್ಚರಿಕೆಯಿಂದ ನೋಡಿಕೊಂಡಿದ್ದಾರೆ. ಶಿವಕಾಶಿಯಿಂದ ಮುಂಬೈಗೆ ಹೊರಟಿದ್ದ ಈ ಪಟಾಕಿ ಲಾರಿ, ಅಗ್ನಿ ಅವಘಡ ತಡೆ ಸಲಕರಣೆಯಿಲ್ಲದೇ ಹೋಗುತಿತ್ತು. ಅಗ್ನಿ ಅವಘಡ ನಿಯಮಗಳನ್ನು ಉಲ್ಲಂಘಿಸಿಯೇ ಪಟಾಕಿ ಸಾಗಾಟ ಮಾಡಲಾಗುತಿತ್ತು.
ಲಾರಿಗಳ ಡಿಕ್ಕಿ ರಭಸಕ್ಕೆ ಪಟಾಕಿಗೆ ಬೆಂಕಿ ಹೊತ್ತಿಕೊಂಡಿದ್ದರೆ ಭಾರೀ ಅನಾಹುತ ಸಂಭವಿಸಲಿತ್ತು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಹಟ್ಟೇಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟಾಕಿ ಹಾರುವ ಸಂಭವ ಇದ್ದ ಕಾರಣ ಪಟಾಕಿ ಇದ್ದ ಲಾರಿಯನ್ನು ಕೆರೆ ಪಕ್ಕದಲ್ಲೇ ನಿಲ್ಲಿಸಿ ಪರಿಶೀಲನೆ ನಡೆಸಲಾಯಿತು.