ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಶತಾಯಗತಾಯ ಪಕ್ಷವನ್ನ ಅಧಿಕಾರಕ್ಕೆ ತರಲು ಅನೇಕ ಪ್ಲ್ಯಾನ್ ರೂಪಿಸುತ್ತಿದೆ. ಖುದ್ದು ಅಖಾಡಕ್ಕೆ ಇಳಿದಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿರುವ ನಾಯಕರನ್ನು ಮನವೊಲಿಸಲು ಕಸರತ್ತು ನಡೆಸಿದ್ದಾರೆ. ಪಕ್ಷದಿಂದ ಹೊರ ಹೋಗಲು ಮನಸು ಮಾಡಿರುವ ನಾಯಕರನ್ನು ಉಳಿಸಿಕೊಳ್ಳಲು ಮುಂದಾಗಿದ್ದು, ಮುನಿಸಿಕೊಂಡ ನಾಯಕರಿಗೆ ದೂರವಾಣಿ ಕರೆ ಮಾಡಿ ಪಕ್ಷ ಬಿಟ್ಟು ಹೋಗದಂತೆ ಮನವೊಲಿಕೆ ಮಾಡುತ್ತಿದ್ದಾರೆ.
Advertisement
ಇದರ ಭಾಗವಾಗಿ ಇದೀಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮೇಲೆ ಮುನಿಸಿಕೊಂಡಿರುವ ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿದ್ದಾರೆ. ಇದನ್ನು ಸರಿಪಡಿಸಲು ಜೆಡಿಎಸ್ ವರಿಷ್ಠ ದೇವೇಗೌಡರೇ ಮುಂದಾಗಿದ್ದು, ಜಿ.ಟಿ.ದೇವೇಗೌಡರಿಗೆ ದೂರವಾಣಿ ಕರೆ ಮಾಡಿ, ಮಾತನಾಡಿ ಮನವೊಲಿಕೆ ಮಾಡಿದ್ದಾರೆ. ಈ ಮೂಲಕ ಬಿರುಕು ಬಿಟ್ಟಿರುವ ಪಕ್ಷವನ್ನು ಸಂಧಾನದ ಮೂಲಕ ಒಂದು ಗೂಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಮುನಿರತ್ನ ಮಂತ್ರಿಯಾಗಲಿದ್ದಾರೆ: ಸೋಮಣ್ಣ ಭವಿಷ್ಯ
Advertisement
Advertisement
ಎರಡು ದಿನಗಳ ಹಿಂದೆ ಜಿ.ಟಿ.ದೇವೇಗೌಡರಿಗೆ ಕರೆ ಮಾಡಿದ್ದ ಮಾಜಿ ಪ್ರಧಾನಿ ದೇವೇಗೌಡರು, ಪಕ್ಷ ಬಿಡುವ ಆಲೋಚನೆ ಮಾಡಬೇಡ ಎಂದು ಮನವೊಲಿಸಿದ್ದಾರೆ. ಏನೇ ಬೇಸರ ಇದ್ದರೂ ಕುಳಿತು ಮಾತನಾಡೋಣ. ಯಾವುದೇ ಆತುರದ ನಿರ್ಧಾರ ಮಾಡದಂತೆ ಮನವಿ ಮಾಡಿದ್ದಾರೆ. ಒಂದು ಪಕ್ಷದಲ್ಲಿ ಸಣ್ಣ ಪುಟ್ಟ ಅಸಮಾಧಾನ ಸಹಜ. ಹಾಗಂತ ಪಕ್ಷ ಬಿಟ್ಟು ಹೋಗೋ ಚಿಂತನೆ ಮಾಡಬೇಡ. ನಿನ್ನನ್ನು ಯಾವತ್ತೂ ಕೈ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
Advertisement
ಏನೇ ಭಿನ್ನಾಭಿಪ್ರಾಯ ಇದ್ದರೂ, ಮಾತನಾಡಿ ಸರಿ ಮಾಡಿಕೊಳ್ಳೋಣ, ನಿನಗೆ ಮತ್ತು ನಿನ್ನ ಮಗನಿಗೆ ಅನ್ಯಾಯ ಆಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ದೇವೇಗೌಡರ ಮಾತನ್ನು ಸಮಾಧಾನದಿಂದಲೇ ಆಲಿಸಿರುವ ಜಿ.ಟಿ.ದೇವೇಗೌಡರು, ಅವರ ಮಾತಿಗೆ ಸಕಾರಾತ್ಮಕವಾಗಿಯೇ ಉತ್ತರಿಸಿದ್ದಾರೆ ಎನ್ನಲಾಗಿದೆ. ಹಾಗಾದರೆ ದೇವೇಗೌಡರ ಮನವೊಲಿಕೆಗೆ ಜಿ.ಟಿ.ದೇವೇಗೌಡರು ಒಪ್ಪಿಕೊಳ್ಳುತ್ತಾರಾ? ಎಲ್ಲ ಭಿನ್ನಾಭಿಪ್ರಾಯ ಮರೆತು ಪಕ್ಷದಲ್ಲೇ ಉಳಿಯುತ್ತಾರಾ? ದೊಡ್ಡಗೌಡರ ಸಂಧಾನ ತಂತ್ರ ಫಲ ಕೊಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.