ಪಕ್ಷದಿಂದ ಉಚ್ಛಾಟನೆ – ಸತ್ಯಕ್ಕೆ ಸೋಲಲ್ಲ ಎಂದ ಸಚಿನ್ ಪೈಲಟ್

Public TV
2 Min Read
sachin pilot 1

ಜೈಪುರ: ಕಾಂಗ್ರೆಸ್ ನಿಂದ ಉಚ್ಛಾಟನೆಗೊಂಡಿರುವ ಸಚಿನ್ ಪೈಲಟ್ ಮೊದಲ ಪ್ರತಿಕ್ರಿಯೆಯನ್ನು ಟ್ವೀಟ್ ಮೂಲಕ ನೀಡಿದ್ದಾರೆ. ಸತ್ಯವನ್ನು ಸಂಕಷ್ಟದಲ್ಲಿ ಸಿಲುಕಿಸಬಹುದೇ ವಿನಃ ಸೋಲಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಾಜಸ್ಥಾನದ ಕೈ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದ ಡಿಸಿಎಂ ಸಚಿನ್ ಪೈಲಟ್ ತಲೆ ದಂಡವಾಗಿದೆ. ಇಂದು ಜೈಪುರದಲ್ಲಿ ನಡೆದ ಎರಡನೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗದ ಹಿನ್ನೆಲೆ ಸಚಿನ್ ಪೈಲೈಟ್ ಅವರನ್ನು ಡಿಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಸಚಿನ್ ಪೈಲಟ್ ಬೆಂಬಲಕ್ಕೆ ನಿಂತಿದ್ದ ಸಚಿವರಾದ ವಿಶ್ವೇಂದ್ರ ಸಿಂಗ್ ಮತ್ತು ರಮೇಶ್ ಮೀನಾ ಅವರನ್ನೂ ಅವರ ಹುದ್ದೆಗಳಿಂದ ತೆಗೆದುಹಾಕಲಾಗಿದೆ. ಪೈಲೈಟ್ ಟೀಂ ನ 17 ಮಂದಿ ಸದಸ್ಯರಿಗೆ ಆತಂಕ ಶುರುವಾಗಿದೆ.

Sachin Pilot

ಇಂದಿನ ಶಾಸಕಾಂಗ ಸಭೆಯಲ್ಲಿ 109 ಶಾಸಕರು ಒಮ್ಮತ ನಿರ್ಧಾರದ ಮೂಲಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರದ ಭಾಗವಾಗಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲ್ ಸಭೆಯ ಬಳಿಕ ತಿಳಿಸಿದ್ದಾರೆ. ಶಾಸಕರು ಪಕ್ಷದಿಂದಲೇ ಸಚಿನ್ ಪೈಲಟ್ ಉಚ್ಚಾಟಿಸಲು ಮನವಿ ಮಾಡಿದ್ದು ಮತ್ತೊಂದು ಅವಕಾಶ ನೀಡಿದ್ದೇವೆ ಎಂದರು.

ರಾಜಸ್ಥಾನ ರಾಜಕೀಯದಲ್ಲಿ ನಿನ್ನೆಯಿಂದ ಹೈಡ್ರಾಮ ನಡೆಯುತ್ತಿದೆ. 30 ಶಾಸಕರೊಂದಿಗೆ ಸಚಿನ್ ಪೈಲೈಟ್ ದೆಹಲಿ ಬಳಿ ಇರುವ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. ಈ ಪೈಕಿ 13 ಮಂದಿ ರಾಜಸ್ಥಾನಕ್ಕೆ ವಾಪಸ್ ಆಗಿದ್ದರು. ಬಾಕಿ ಉಳಿದ ಸದಸ್ಯರು ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಭಾಗಿಯಾಗುವಂತೆ ಹೈಕಮಾಂಡ್ ಸೂಚಿಸಿತ್ತು. ಇಂದು ಬೆಳಗ್ಗೆ ಕೂಡಾ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅಹ್ಮದ್ ಪಟೇಲ್, ಪಿ ಚಿದಂಬರಂ, ಕೆ.ಸಿ ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಪೈಲಟ್ ಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದರು.

ಸಚಿನ್ ಪೈಲೈಟ್ ಯಾರ ಮಾತಿಗೂ ಬೆಲೆ ನೀಡಿರಲಿಲ್ಲ. ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ತಮ್ಮನ್ನು ಸಿಎಂ ಮಾಡಬೇಕು ಮತ್ತು ರಾಜ್ಯ ಉಸ್ತುವಾರಿಯನ್ನು ಬದಲಿಸುವಂತೆ ಡಿಮ್ಯಾಂಡ್ ಇಟ್ಟಿದ್ದರು. ಅಂತಿಮ ಹೈಕಮಾಂಡ್ ಶಾಸಕರ ಸಮ್ಮಿತಿ ಮೇರೆಗೆ ಎರಡನೇ ಶಾಸಕಾಂಗ ಸಭೆ ಬಳಿಕ ಈ ಮಹತ್ವ ನಿರ್ಧಾರ ತೆಗೆದುಕೊಂಡಿದೆ.

 

Share This Article