ಬೆಂಗಳೂರು: ಕುಮಾರಸ್ವಾಮಿ ಸುತ್ತಮುತ್ತ ಕೆಲವು ಕೆಟ್ಟ ಗ್ರಹಗಳು ಇದ್ದವು. ಅವು ಒಂದೊಂದೇ ಖಾಲಿಯಾಗುತ್ತಿದೆ ಎಂದು ಹೇಳುವ ಮೂಲಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ಎಚ್‌ಡಿ ರೇವಣ್ಣ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಲ್ಲಿ ಗ್ರಹಗಳಾಗಿ ಕಾಡುತ್ತಿದ್ದವು, ಅಲ್ಲಿಗೆ ಹೋಗಿ ಸ್ವಲ್ಪ ಕಾಡಲಿ. ಡಿಕೆ ಶಿವಕುಮಾರ್ ಅವರಿಗೂ ಸ್ವಲ್ಪ ಗೊತ್ತಾಗಲಿ. ಗ್ರಹಗಳನ್ನೆಲ್ಲಾ ಅವರು ಕರೆಸಿಕೊಳ್ಳುತ್ತಿದ್ದಾರೆ. ಇಲ್ಲಿ ಇನ್ನೂ ಒಂದೆರಡು ಕೆಟ್ಟ ಗ್ರಹಗಳಿವೆ. ಅವೂ ಹೋದರೆ ಕುಮಾರಸ್ವಾಮಿಗೆ ಒಳ್ಳೆಯದಾಗುತ್ತದೆ ಎಂದು ಅಭಿಪ್ರಾಯಪಟ್ಟರು.
2023 ಕ್ಕೆ ಜೆಡಿಎಸ್ ಗೆ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲಾಗಲ್ಲ. ಇಂತಹ ಕೆಟ್ಟ ಗ್ರಹಗಳು ಆದಷ್ಟು ಬೇಗ ಪಕ್ಷದಿಂದ ಖಾಲಿಯಾಗಲಿ ಎಂದು ಹಾರೈಸುತ್ತೇನೆ ಎಂದು ವ್ಯಂಗ್ಯವಾಡಿದರು.
ಕುಮಾರಣ್ಣ ಕೆಲ ದಿನ ನೋವು ಅನುಭವಿಸಿದ್ದರು. ಆ ಗ್ರಹದ ಎಫೆಕ್ಟ್ ಡಿಕೆಶಿ ಅನುಭವಿಸುವುದು ಬೇಡ ಅಂತ ನಮ್ಮ ಮನವಿ. ಇನ್ನೂ ಕೆಲವು ಗ್ರಹಗಳಿವೆ. ಅವು ಹೋದ್ರೆ ಎಲ್ಲವೂ ಸ್ವಚ್ಛ ಆಗುತ್ತದೆ. ಕಾಂಗ್ರೆಸ್‍ನಲ್ಲಿ ಗ್ರಹಗಳು ಕಡಿಮೆ ಇದೆ. ಈ ಗ್ರಹಗಳೆಲ್ಲ ಹೋದರೆ ಅವರಿಗೆ ಒಳ್ಳೆಯದಂತೂ ಆಗುವುದಿಲ್ಲ. ಭಗವಂತ ಶಿವಕುಮಾರ್ ಅವರಿಗೆ ಒಳ್ಳೆಯದು ಮಾಡಲಿ ಎಂದರು.
ಒಂಭತ್ತು ಗ್ರಹಗಳು ಸುತ್ತುತ್ತವೆ. ಗ್ರಹಗಳು ಪಥ ಬದಲಿಸುತ್ತಿವೆ. ಕೆಪಿಸಿಸಿ ಅಧ್ಯಕ್ಷರು ಅದನ್ನ ಬರಮಾಡಿಕೊಳ್ಳುತ್ತಿದ್ದಾರೆ. ಕೆಟ್ಟ ಗ್ರಹಗಳೆಲ್ಲ ಹೋದರೆ ಜೆಡಿಎಸ್ ಪಕ್ಷಕ್ಕೆ ಒಳ್ಳೆಯದು. 2023ಕ್ಕೆ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.