ರಾಯಚೂರು: ಅನುಮಾನಕ್ಕಿಂತ ದೊಡ್ಡ ರೋಗವಿಲ್ಲ ಅಂತಾರೆ, ನಿಜ ಇಂತಹದ್ದೇ ಅನುಮಾನದಿಂದ ರಾಯಚೂರಿನ ಸಿರವಾರ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ಗ್ರಾಮಸ್ಥರು ಕೆರೆಯಲ್ಲಿದ್ದ ಕುಡಿಯುವ ನೀರಿನ್ನೇ ಖಾಲಿಮಾಡಿ ಈಗ ಪರದಾಡುತ್ತಿದ್ದಾರೆ. ಪಕ್ಕದ ಅತ್ತನೂರು ಗ್ರಾಮದ ವ್ಯಕ್ತಿಯೋರ್ವ ಕೆರೆಗೆ ಏನನ್ನೋ ಎಸೆದ ಎಂಬ ಕಾರಣಕ್ಕೆ ಅವನು ಏನೋ ಕೆಟ್ಟದ್ದನ್ನೇ ಎಸೆದಿದ್ದಾನೆ ಎಂದು ಕೆರೆಯ ನೀರನ್ನೇ ಖಾಲಿಮಾಡಿದ್ದಾರೆ.
ಕೊರೊನಾ ವೈರಸ್ ಆತಂಕ ಕೂಡ ಜನರನ್ನು ಕಾಡಿದೆ. ಕೆರೆಗೆ ಕಲ್ಲಿನ ರೂಪದ ವಸ್ತುವನ್ನ ಎಸೆದ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರಿಂದ ಗ್ರಾಮಸ್ಥರ ಅನುಮಾನ ಬಲವಾಗಿದೆ. ಆದರೆ ಮರುದಿನ ಗ್ರಾಮಸ್ಥರು ಹಾಗೂ ಸಿರವಾರ ಠಾಣೆ ಪೊಲೀಸರ ಸಮ್ಮುಖದಲ್ಲಿ ಆ ವ್ಯಕ್ತಿ ಕೆರೆಯ ನೀರನ್ನು ಸ್ವತಃ ಕುಡಿದು, ನನ್ನಿಂದ ತಪ್ಪಾಗಿಲ್ಲ ಕೇವಲ ಕಲ್ಲನ್ನ ಎಸೆದಿದ್ದೆ ಎಂದು ಸ್ಪಷ್ಟಪಡಿಸಿದ್ದಾನೆ. ಆದರೆ ಗ್ರಾಮಸ್ಥರಲ್ಲಿ ಅನುಮಾನ ಕಡಿಮೆಯಾಗದ ಹಿನ್ನೆಲೆ ಕೆರೆ ನೀರನ್ನು ಪಂಪ್ ಸೆಟ್ ನಿಂದ ಖಾಲಿಮಾಡಲಾಗಿದೆ.
Advertisement
Advertisement
ಕೆರೆಯ ಬಳಿಯ ಶುದ್ಧಕುಡಿಯುವ ನೀರಿನ ಘಟಕದಲ್ಲಿ ನೀರು ಕೇಳಿದ್ದಕ್ಕೆ, ಘಟಕದ ಸಿಬ್ಬಂದಿ ಹಣ ಕೇಳಿದ್ದಾರೆ. ಇದೇ ಗ್ರಾಮದ ಪಂಚಾಯ್ತಿಯಲ್ಲಿ ಲೈನ್ ಮ್ಯಾನ್ ಆಗಿ ಈ ಹಿಂದೆ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಹಣಕೊಟ್ಟು ನೀರು ಪಡೆಯದೇ ಕೆರೆಯ ನೀರನ್ನು ಕುಡಿದು ಕೆರೆಗೆ ಕಲ್ಲು ಎಸೆದಿದ್ದಾನೆ. ಇದನ್ನು ಗಮನಿಸಿದ ಗ್ರಾಮಸ್ಥರು ಏನೋ ವಿಷಕಾರಿ ವಸ್ತುವನ್ನ ಎಸೆದಿದ್ದಾನೆ ಎಂದು ಅನುಮಾನಗೊಂಡಿದ್ದಾರೆ ಎನ್ನಲಾಗಿದೆ.
Advertisement
Advertisement
ಕೆರೆಯಲ್ಲಿ ನೀರು ಖಾಲಿಯಾಗಿದ್ದರಿಂದ ಈಗ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಆದಷ್ಟು ಬೇಗ ಕೆರೆಯನ್ನ ತುಂಬಿಸುವುದಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.