ನವದೆಹಲಿ: ದೆಹಲಿ ಹಿಂಸಾಚಾರ ಘಟನೆಯ ಪ್ರಮುಖ ಆರೋಪಿಯಾಗಿರುವ ಪಂಜಾಬ್ ನಟ ದೀಪ್ ಸಿಧುನನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಪ್ರಕಟಿಸಿದ್ದಾರೆ.
ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆ ಬಳಿ ನಡೆದ ರೈತರ ಪ್ರತಿಭಟನೆ ವೇಳೆಯ ಹಿಂಸಾಚಾರ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದೀಪ್ ಸಿಧು ಮತ್ತು ಇತರ ಆರೋಪಿಗಳು ನಾಪತ್ತೆಯಾಗಿದ್ದಾರೆ.
ದೀಪ್ ಸಿಧು ಮತ್ತು ಇತರ ಆರೋಪಿಗಳನ್ನು ಬಂಧಿಸಲು ಸಹಾಯ ಮಾಡುವವರಿಗೆ 1 ಲಕ್ಷ ರೂಗಳ ಬಹುಮಾನ ನೀಡಲಾಗುತ್ತದೆ. ಇತರ 4 ಮಂದಿ ಆರೋಪಿಗಳ ಕುರಿತಂತೆ ಮಾಹಿತಿ ನೀಡಿದವರಿಗೆ 50,000 ರೂ ಬಹುಮಾನ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಣರಾಜ್ಯೋತ್ಸವ ನಡೆದ ಹಿಂಸಾಚಾರ ಘಟನೆಯಲ್ಲಿ ಜಗ್ಬೀರ್ ಸಿಂಗ್, ಬುಟಾ ಸಿಂಗ್, ಸುಖದೇವ್ ಸಿಂಗ್ ಮತ್ತು ಇಕ್ಬಾಲ್ ಸಿಂಗ್ ಪ್ರಮುಖ ಆರೋಪಿಗಳಾಗಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯಿದೆಯನ್ನು ವಿರೋಧಿಸಿ ರೈತರು ನಡೆಸಿದ ಟ್ರಾಕ್ಟರ್ ರ್ಯಾಲಿ ಪ್ರತಿಭಟನೆ ವೇಳೆ ಬ್ಯಾರಿಕೇಡ್ ಮುರಿದು ಬಲವಂತವಾಗಿ ಕೆಂಪು ಕೋಟೆ ಒಳಗೆ ದಾರಿ ಮಾಡಿಕೊಂಡು ನುಗ್ಗಿ ಅಲ್ಲಿದ್ದ ಧ್ವಜರೋಹಣ ಕಂಬ ಏರಿದ ರೈತರು ಸಿಖ್ ಧಾರ್ಮಿಕ ಧ್ವಜವನ್ನು ಹಾಕಿದ್ದರು.
ಈ ವೇಳೆ ಪೊಲೀಸರು ಶಾಂತಿಯತೆಯನ್ನು ಕಾಪಾಡುವಂತೆ ಹಾಗೂ ರೈತರು ಕೆಳಗೆ ಇಳಿದು ಹಿಂತಿರುಗುವಂತೆ ಕೇಳಿಕೊಂಡರೂ ಒಪ್ಪದೆ ರೈತರು ಪ್ರತಿಭಟನೆ ನಡೆಸಿದರು. ಕೊನೆಗೆ ಪರಿಸ್ಥಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಆಶ್ರುವಾಯು ಹಾಗೂ ಲಾಠಿ ಪ್ರಹಾರ ನಡೆಸಿದ್ದರು.
ಜನವರಿ 26ರಂದು ನಡೆದ ಗಲಭೆಯ ಕೆಲವು ದೃಶ್ಯಾವಳಿಗಳನ್ನು ವೀಕ್ಷಿಸಿದ ದೆಹಲಿ ಕ್ರೈಂ ಬ್ರಾಂಚ್ ತಂಡದ ಪೊಲೀಸರು ಇದೀಗ 12 ಮಂದಿ ಆರೋಪಿಗಳ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಗೊಳಿಸಿರುವ ಫೋಟೋದಲ್ಲಿ ಆರೋಪಿಗಳು ಕೋಲುಗಳನ್ನು ಹಿಡಿದುಕೊಂಡಿರುವುದು ಕಂಡು ಬಂದಿದೆ.