– ರಾಜ್ಯಪಾಲರಿಗೆ ಕರೆ ಮಾಡಿ ಮಮತಾ ಆಕ್ರೋಶ
– ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ
ಕೋಲ್ಕತ್ತಾ: ಪಂಚ ರಾಜ್ಯಗಳ ಪೈಕಿ ಇಂದು ಪಶ್ಚಿಮ ಬಂಗಾಳದ 30 ಮತ್ತು ಅಸ್ಸಾಂನ 39 ಕ್ಷೇತ್ರಗಳಿಗೆ 2ನೇ ಹಂತದ ಮತದಾನ ನಡೆಯಿತು. ಬಂಗಾಳದಲ್ಲಿ ಶೇ.80ರಷ್ಟು ಮತದಾನ ಆಗಿದೆ. ಅಸ್ಸಾಂನಲ್ಲಿ ಶೇ.73ರಷ್ಟು ಮತದಾನವಾಗಿದೆ.
ಇಂದು ನಡೆದ ಚುನಾವಣೆಯಲ್ಲಿ ಸಿಎಂ ಮಮತಾ ಸ್ಪರ್ಧೆ ಮಾಡಿರುವ ನಂದಿಗ್ರಾಮವೂ ಇದೆ. ಇವತ್ತು ಇಡೀ ದಿನ ಮಮತಾ ನಂದಿಗ್ರಾಮದಲ್ಲಿಯೇ ಬೀಡುಬಿಟ್ಟಿದ್ರು. ಮತಗಟ್ಟೆಯೊಂದಕ್ಕೆ ಭೇಟಿ ನೀಡಿದ ಮಮತಾ, ಅಲ್ಲಿಂದಲೇ ರಾಜ್ಯಪಾಲರಿಗೆ ಫೋನ್ ಮಾಡಿ, ಸಿಆರ್‍ಪಿಎಫ್ ಜವಾನರು ಜನರಿಗೆ ಮತ ಹಾಕಲು ಬಿಡ್ತಿಲ್ಲ ಎಂದು ದೂರು ನೀಡಿದ್ರು. ಯುಪಿ, ಬಿಹಾರದಿಂದ ಬಂದವರು ಮತಗಟ್ಟೆ ಬಳಿ ಭಾರೀ ಹಂಗಾಮಾ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ರು.
ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ ನಂದಿಗ್ರಾಮದಲ್ಲಿ ತಮ್ಮ ಹಕ್ಕು ಚಲಾಯಿಸಿದ್ರು. ಮಮತಾ ಸೋಲೋದು ಖಚಿತ ಅಂದ್ರು. ಇಂದು ಬೆಳಗ್ಗೆ ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಈ ವಿಚಾರದಲ್ಲಿ ಪರಸ್ಪರ ಕೆಸರೆರಚಾಟ ನಡೀತು.
ಅತ್ತ ಅಸ್ಸಾಂನ ಕೊಕ್ರಜಾರ್‍ನಲ್ಲಿ ಭರ್ಜರಿ ರ್ಯಾಲಿ ನಡೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ರು. ಅಸ್ಸಾಂನಲ್ಲಿ ಫುಟ್ಬಾಲ್ ಅತ್ಯಂತ ಜನಪ್ರಿಯ ಕ್ರೀಡೆ. ಫುಟ್ಬಾಲ್ ಭಾಷೆಯಲ್ಲೇ ಹೇಳುವುದಾದರೆ ಅಸ್ಸಾಂ ಜನತೆ ಕಾಂಗ್ರೆಸ್ಸಿಗೆ ರೆಡ್ ಕಾರ್ಡ್ ತೋರಿಸಿದ್ದಾರೆ ಅಂತ ಕುಟುಕಿದ್ರು. ಕೊಕ್ರಜಾರ್‍ನಲ್ಲಿ ನಡೆದ ಭೀಕರ ಹಿಂಸಾಚಾರಕ್ಕೆ ಕಾರಣವಾದ ಪಕ್ಷದೊಂದಿಗೆ ಕಾಂಗ್ರೆಸ್ ಚುನಾವಣಾ ಮೈತ್ರಿ ಮಾಡಿಕೊಂಡಿದೆ. ಇದು ಅಧಿಕಾರಕ್ಕೆ ಹಪಾಹಪಿಸುತ್ತಿರುವ ಕಾಂಗ್ರೆಸ್ಸಿನ ಕುತಂತ್ರ ರಾಜಕಾರಣವನ್ನು ಬಿಂಬಿಸುತ್ತೆ ಎಂದು ವಾಗ್ದಾಳಿ ನಡೆಸಿದ್ರು.
ಸಿಎಂ ಪಳನಿಸ್ವಾಮಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಡಿಎಂಕೆ ಮುಖಂಡ ಎ ರಾಜಾಗೆ 48 ಗಂಟೆ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಆದರೆ ಮಹಿಳೆಯರ ಘನತೆ ಕುಂದಿಸುವ ಹೇಳಿಕೆ ನೀಡಿಲ್ಲ ಎ.ರಾಜಾ ಸ್ಪಷ್ಟಪಡಿಸಿದ್ದಾರೆ.