ತುಮಕೂರು: ಪಂಚಮಸಾಲಿಗೆ 2ಎ ಮೀಸಲಾತಿ ಕುರಿತು ಸ್ವಾಮೀಜಿಗಳು ಪಾದಯಾತ್ರೆ ನಡೆಸುತ್ತಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಹ ನಿರ್ಧರಿಸಲಾಗಿತ್ತು. ಈ ಸಂಬಂಧ ಪಂಚಮಸಾಲಿಯ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ತುಮಕೂರಿನಲ್ಲಿ ಸಭೆ ನಡೆಸಿ ಜಯಮೃತ್ಯುಂಜಯ ಸ್ವಾಮೀಜಿಗಳನ್ನು ಮನವೊಲಿಸಲು ಸಚಿವ ಮುರುಗೇಶ್ ನಿರಾಣಿ ತೆರಳಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ಕೈ ಬಿಟ್ಟು ಕೇವಲ ಸಮಾವೇಶ ನಡೆಸಿ ಪಾದಯಾತ್ರೆ ಮುಗಿಸಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ವಿಜಯಾನಂದ ಕಾಶಪ್ಪನವರ್ ವಿರೋಧ ವ್ಯಕ್ತಪಡಿಸಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಿಯೇ ಸಿದ್ಧ ಎಂದು ಹೇಳಿದ್ದಾರೆ. ಹೀಗಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.
Advertisement
Advertisement
ಸಚಿವ ನಿರಾಣಿ ಮನವೊಲಿಕೆ ಬಳಿಕ ವಿಧಾನಸೌಧ ಮುತ್ತಿಗೆಯನ್ನು ಕೈ ಬಿಡುವುದಾಗಿ ಸಭೆಯಲ್ಲಿ ಒಪ್ಪಿಕೊಳ್ಳಲಾಗಿದೆ. ಈ ಮೂಲಕ ಸಚಿವ ಮುರುಗೇಶ್ ನಿರಾಣಿ ಕೊನೆಗೆ ಮೇಲುಗೈ ಸಾಧಿಸಿದಂತಾಗಿದೆ. ಈ ಘಟನೆ ನಡೆಯುತ್ತಿದ್ದಂತೆ ವಿಜಯಾನಂದ ಕಾಶಪ್ಪನವರ್ ಸಭೆಯಿಂದ ಹೊರ ಬರಲು ಮುಂದಾಗಿದ್ದಾರೆ. ಮುಖಂಡರು ಮತ್ತೆ ಸಭೆಯೊಳಗೆ ಕರೆದೊಯ್ದಿದ್ದಾರೆ.
Advertisement
ಈ ಮೂಲಕ ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕೊನೆಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನ ಸೌಧ ಮುತ್ತಿಗೆ ಕೈ ಬಿಡಲಾಗಿದೆ. ಫೆ.21 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಸಭೆಯ ನಿರ್ಣಯ ಪ್ರಕಟಿಸಿದ್ದಾರೆ.
Advertisement
ಈ ಮೂಲಕ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಸ್ವಾಮೀಜಿಗಳ ಹೋರಾಟವನ್ನು ತಣ್ಣಗೆ ಮಾಡುವಲ್ಲಿ ಸಚಿವ ಮುರುಗೇಶ್ ನಿರಾಣಿ ಯಶಸ್ವಿಯಾಗಿದ್ದು, ಬೆಂಗಳೂರಿಗೆ ಆಗಮಿಸಲಿರುವ ಪಾದಯಾತ್ರೆಯನ್ನು ಕೇವಲ ಸಮಾವೇಶಕ್ಕೆ ಸೀಮಿತ ಮಾಡುವಂತೆ ಮಾಡಿದ್ದಾರೆ.