ಪಂಚಮಸಾಲಿ ಮೀಸಲು ಪಾದಯಾತ್ರೆಗೆ ಟ್ವಿಸ್ಟ್ – ವೀರಶೈವ ಲಿಂಗಾಯತ ಶ್ರೀಗಳಿಂದಲೂ ಬೆಂಬಲ

Public TV
4 Min Read
Reservation

– ಇಡೀ ಸಮುದಾಯವನ್ನು ಒಬಿಸಿಗೆ ಸೇರಿಸಲು ಪಟ್ಟು
– ಪಂಚಮಸಾಲಿ ಹೋರಾಟ ವಿಫಲಕ್ಕೆ ಯತ್ನ ನಡೀತಿದ್ಯಾ?

ಬೆಂಗಳೂರು: ಮೀಸಲಾತಿ ಹೋರಾಟಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಪಂಚಮಸಾಲಿ ಸಮುದಾಯದ ಶ್ರೀಗಳು 2ಎ ಮೀಸಲಾತಿಗೆ ಆಗ್ರಹಿಸಿ ನಡೆಸಿರುವ ಪಾದಯಾತ್ರೆ ಮತ್ತಷ್ಟು ಬಲ ಬಂದಿದೆ. ಪಂಚಮಸಾಲಿಗಳ ಹೋರಾಟದಲ್ಲಿ ವೀರಶೈವ-ಲಿಂಗಾಯತ ಶ್ರೀಗಳೂ ಕೈ ಜೋಡಿಸಿದ್ದು, ಇಡೀ ಲಿಂಗಾಯತ ಸಮುದಾಯದ 102 ಉಪ ಜಾತಿಗಳಿಗೂ ಒಬಿಸಿ ಮೀಸಲಾತಿಗಾಗಿ ಕಹಳೆ ಮೊಳಗಿಸಿದ್ದಾರೆ.

Panchamasali 1

ಏಳು ಪುಟಗಳ ಮನವಿ: ಈಗಾಗಲೇ 40 ಉಪ ಜಾತಿಗಳಿಗಿರುವ ಹಿಂದುಳಿದ ವರ್ಗದ ಮೀಸಲಾತಿ ಇತರ ಉಪ ಜಾತಿಗಳಿಗೂ ಸಿಗಲಿದ್ಯಾ ಅನ್ನೋ ಪ್ರಶ್ನೆ ಈಗ ಎದ್ದಿದೆ. ಇವತ್ತು ಬೆಳಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಿದ 150ಕ್ಕೂ ಸ್ವಾಮೀಜಿಗಳು ಇಡೀ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಬೇಕೆಂದು ಹೊಸ ಬೇಡಿಕೆ ಇಟ್ಟಿದ್ದಾರೆ. ಇದಕ್ಕಾಗಿ ಪಂಚಮಸಾಲಿ ಪಾದಯಾತ್ರೆಯಲ್ಲಿ ಭಾಗಿಯಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ ಪರಮಶಿವಯ್ಯ ಮೂಲಕ ಸಿಎಂಗೂ ಏಳು ಪುಟಗಳ ಮನವಿ ಪತ್ರ ಸಲ್ಲಿಸಿದ್ದಾರೆ.

Panchamasali 2

ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸುವಂತೆ ಮೋದಿ ಸರ್ಕಾರಕ್ಕೆ ಶಿಫಾರಸು ಮಾಡಿದರೆ, ಪ್ರಧಾನಿ ಬಳಿಗೂ ಮಠಾಧೀಶರ ನಿಯೋಗ ಕೊಂಡೊಯ್ಯುವುದಾಗಿ ಉಜ್ಜೈನಿ ಜಗದ್ಗುರುಗಳು ತಿಳಿಸಿದ್ದಾರೆ. ಶ್ರೀಶೈಲ ಶ್ರೀಗಳು ಮಾತನಾಡಿ, ಒಬಿಸಿ ಬೇಡಿಕೆ ಇವತ್ತಿನದ್ದಲ್ಲ. ಕಳೆದ ವರ್ಷ ಮೋದಿ, ಕಾಶಿಯ ಜಂಗಮವಾಡಿಗೆ ಬಂದಾಗಲೇ ಮನವಿ ನೀಡಲು ಸಜ್ಜಾಗಿದ್ದೀವಿ. ಇದು ಶಿಷ್ಟಾಚಾರ ಅಲ್ಲ ಎಂಬ ಕಾರಣಕ್ಕೆ ಸುಮ್ಮನಾದ್ದೀವಿ. ಈಗ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

Panchamasali 3

ಹೋರಾಟ ಅಲ್ಲ, ಹಕ್ಕೊತ್ತಾಯ: ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಸಮಸ್ತ ವೀರಶೈವ ಲಿಂಗಾಯಿತರನ್ನು ಒಬಿಸಿಗೆ ಸೇರ್ಪಡೆ ಮಾಡುವವರೆಗೆ ಹೋರಾಟ ಮಾಡಬೇಕು ಅಂತಾ ಕರೆ ನೀಡಿದರು. ಅಂದು ಒಬಿಸಿಗೆ ಸೇರ್ಪಡೆ ಮಾಡುವ ನಿರ್ಧಾರದಿಂದ ಸಿಎಂ ಯಡಿಯೂರಪ್ಪ ಹಿಂದೆ ಸರಿಯದೇ ಇದ್ದಿದ್ರೆ ಇಂದು ಪಂಚಮಸಾಲಿ ಜಗದ್ಗುರುಗಳು ಕಾಲಿಗೆ ಬೊಬ್ಬೆ ಬರುವ ಹಾಗೆ ಪಾದಯಾತ್ರೆ ಮಾಡಬೇಕಾಗಿ ಬರ್ತಿರಲಿಲ್ಲ ಅಂತಾ ಅಭಿಪ್ರಾಯಪಟ್ಟರು. ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇದು ಹೋರಾಟ ಅಲ್ಲ, ಹಕ್ಕೊತ್ತಾಯ. ಪಂಚಮಸಾಲಿಗಳ ಹೋರಾಟವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡ್ತಿಲ್ಲ ಎಂದು ಸ್ಪಷ್ಟಪಡಿಸಿದರು.

Vijayanad Kashappanavar 1

ಸಭೆಯಲ್ಲಿ ಸಿಎಂ ಆಪ್ತರು: ವೀರಶೈವ ಲಿಂಗಾಯತ ಸಮುದಾಯ ಪಂಚಾಚಾರ್ಯರು, ವಿರಕ್ತ ಮಠಾಧೀಶರು ನಡೆಸಿದ ಬೃಹತ್ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಆಪ್ತರಾದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ, ವಿಜಯೇಂದ್ರ ಆಪ್ತ ಕ್ರೆಡಿಲ್ ಅಧ್ಯಕ್ಷ ರುದ್ರೇಶ್ ಪಾಲ್ಗೊಂಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡ್ತು. ಸಭೆ ಉದ್ದೇಶಿಸಿ ಮಾತನಾಡಿದ ಪರಮಶಿವಯ್ಯ, ಯಡಿಯೂರಪ್ಪ ಪಡುತ್ತಿರುವ ಹಿಂಸೆ ಕಂಡು ನೋವಾಗುತ್ತಿದೆ ಅಂದ್ರು. ಒಂದ್ಕಡೆ ಕುರುಬರು, ಮತ್ತೊಂದ್ಕಡೆ ವಾಲ್ಮೀಕಿಗಳು.. ಇನ್ನೊಂದ್ಕಡೆ ನಾವು ಸಿಎಂಗೆ ಹಿಂಸೆ ನೀಡ್ತಿದ್ದೇವೆ. ಅವರು ಮುಳ್ಳಿನ ಹಾಸಿಗೆ ಮೇಲಿದ್ದಾರೆ. ಮಹತ್ತರ ಜವಾಬ್ದಾರಿ ಸಿಎಂ ಮೇಲಿದೆ. ಆದರೂ ಫೆಬ್ರವರಿ 18-19 ರಂದು ಪ್ರಮುಖ ಮಠಾಧೀಶರ ನಿಯೋಗವನ್ನು ಸಿಎಂ ಭೇಟಿ ಮಾಡಲು ಉದ್ದೇಶಿಸಿದ್ದಾರೆ ಅಂತಾ ಪರಮಶಿವಯ್ಯ ತಿಳಿಸಿದರು.

Vijayendra 1

ಕ್ರೆಡಿಲ್ ಅಧ್ಯಕ್ಷ ರುದ್ರೇಶ್ ಮಾತನಾಡಿ, ಪಂಚಮಸಾಲಿ ಶ್ರೀಗಳ ಹೋರಾಟಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು. ಅವರು ಹೋರಾಟ ಸರಿಯಾಗಿದೆ. ಆದ್ರೇ, ಅವರು ಕೇವಲ ಒಂದು ಪಂಗಡದ ಪರವಾಗಿ ಹೋರಾಟ ಮಾಡ್ತಿರೋದು ನೋವು ತಂದಿದೆ. ಮೀಸಲಾತಿ ಹೋರಾಟದ ಕಾರಣಕ್ಕೆ ನಮ್ಮ ಸಮಾಜ ಒಡೆಯಬಾರದು ಅಂತಾ ಅಭಿಪ್ರಾಯಪಟ್ರು. ಮಾಜಿ ಸಂಸದ ಪ್ರಭಾಕರ್ ಕೋರೆ ಮಾತಾಡಿ, ಪಂಚಮಸಾಲಿ ಶ್ರೀಗಳಿಗೆ ಕಾನೂನಿನ ತಿಳುವಳಿಕೆ ಕಮ್ಮಿ ಎಂದು ಕಾಣುತ್ತೆ. 2ಎಗಿಂತ ಓಬಿಸಿ ಹೆಚ್ಚು.. ಇಡೀ ಸಮುದಾಯವನ್ನು ಒಬಿಸಿಗೆ ಸೇರಿಸಬೇಕು ಅಂತಾ ಸಿಎಂಗೆ ಮನವಿ ಮಾಡಿದ್ದೀನಿ. ಪಂಚಮಸಾಲಿಗಳು ನಮ್ಮ ಹೋರಾಟದ ಜೊತೆ ಕೈಜೋಡಿಸಲಿ ಅಂತಾ ಹೇಳಿದರು.

ವಿಜಯೇಂದ್ರ ವರ್ಸಸ್ ಕಾಶಪ್ಪನವರ್:
ಮೀಸಲಾತಿ ಹೋರಾಟದಲ್ಲಿ ರಾಜಕೀಯ ನುಸುಳಿದಂತೆ ಕಾಣುತ್ತಿದೆ. ಪಂಚಮಸಾಲಿ ಹೋರಾಟವನ್ನು ಹತ್ತಿಕ್ಕಲು ಸಿಎಂ ಬಿಎಸ್‍ವೈ ಪುತ್ರ ವಿಜಯೇಂದ್ರ ಸಮುದಾಯದ ಎಲ್ಲಾ ಸ್ವಾಮೀಜಿಗಳನ್ನು ಎತ್ತಿಕಟ್ಟಿದ್ದಾರೆ ಎಂಬ ಗಂಭೀರ ಆಪಾದನೆ ಕೇಳಿಬಂದಿದೆ. ತುಮಕೂರಲ್ಲಿ ಮಾತಾಡಿದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಸ್ವಾಮೀಜಿಗಳ ಮೂಲಕ ಪಂಚಮಸಾಲಿಗಳಿಗೆ ಮೀಸಲಾತಿ ಕೊಡಬಾರದೆಂದು ಒತ್ತಡ ಹೇರುವ ಕೆಲಸ ನಡೆಯುತ್ತಿದೆ. ಇಲ್ಲಿ ಸಿಎಂ ಪುತ್ರ ವಿಜಯೇಂದ್ರ ನಡೆಸ್ತಿರುವ ಷಡ್ಯಂತ್ರ್ಯ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಕಾಶಪ್ಪನವರ್ ಆರೋಪ ಮಾಡಿದ್ದಾರೆ.

ಪಂಚಮಸಾಲಿ ಪಾದಯಾತ್ರೆ ವೇಳೆಯೇ ಸ್ವಾಮೀಜಿಗಳನ್ನು ಸೇರಿಸಬೇಕಿತ್ತಾ? ವಿಜಯೇಂದ್ರ ಷಡ್ಯಂತ್ರ್ಯ ಫಲಪ್ರದ ಆಗಲು ಬಿಡಲ್ಲ. ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ರೆ ಉಗ್ರ ಹೋರಾಟ ನಡೆಸ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಸಭೆ ಹಿಂದೆ ಪ್ರಮುಖರೊಬ್ಬರ ಪುತ್ರ ಇದ್ದಾರೆ ಎನ್ನಲಾಗಿದೆ. ಸಮುದಾಯದ ಸ್ವಾಮಿಜಿಗಳ ಹೋರಾಟ ನಮ್ಮ ಹೋರಾಟಕ್ಕೆ ಪೂರಕವಾಗಿರಬೇಕು. ಹತ್ತಿಕ್ಕುವ ಪ್ರಯತ್ನ ಇದ್ರಲ್ಲಿ ಇರಬಾರದು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ದಿಂಗಾಲೇಶ್ವರ ಶ್ರೀಗಳು, ನಾವು ಯಾವತ್ತು ಕೂಡ ಪಂಚಮಸಾಲಿ ಶ್ರೀಗಳ ನಿಲುವಿನ ವಿರುದ್ಧ ಇಲ್ಲ. ಅವರ ಹೋರಾಟವನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿಲ್ಲ. ನಮ್ಮ ನಿಲುವು ಒಂದೇ ಎಲ್ಲರನ್ನು ಓಬಿಸಿಗೆ ಸೇರಿಸಬೇಕು ಎನ್ನುವುದಷ್ಟೇ ಆಗಿದೆ ಎಂದು ಸ್ಪಷ್ಟಪಡಿಸಿದರು.

ವಿಜಯೇಂದ್ರ ತಿರುಗೇಟು: ಕಾಶಪ್ಪನವರ್ ಆರೋಪಕ್ಕೆ ತಿರುಗೇಟು ನೀಡಿದ ವಿಜಯೇಂದ್ರ, ನಾನು ಯಾವ ಹೋರಾಟವನ್ನು ದಿಕ್ಕುತಪ್ಪಿಸಲು ಯತ್ನಿಸುತ್ತಿಲ್ಲ. ಕೆಲವರಿಗೆ ನನ್ನ ಹೆಸರು ಪ್ರಸ್ತಾಪ ಮಾಡದಿದ್ರೆ ತಿಂದ ಅನ್ನ ಅರಗೋದಿಲ್ಲ. ಯಾರ ಯೋಗ್ಯತೆ ಏನು ಗೊತ್ತಿದೆ. ಯಾರು ನನ್ನ ಬಗ್ಗೆ ಮಾತಾಡಿದ್ದು, ಬಾರ್‍ನಲ್ಲಿ ಗಲಾಟೆ ಮಾಡಿಕೊಂಡಿದ್ರಲ್ಲಾ ಆ ಕಾಶಪ್ಪನವರಾ ಎಂದು ಪ್ರಶ್ನಿಸಿ ಹರಿಹಾಯ್ದರು.

Share This Article
Leave a Comment

Leave a Reply

Your email address will not be published. Required fields are marked *