ಬೆಂಗಳೂರು: ಮಡಿಕೇರಿ ಮೂಲದ ಪ್ರಮೋದ್ ಬೋಪಣ್ಣ ನ್ಯೂಸ್ ರೀಡರ್ ಆಗಿ ವೃತ್ತಿ ಆರಂಭಿಸಿ ಇದೀಗ ಸ್ಯಾಂಡಲ್‍ವುಡ್ ಯುವ ಹಾಗೂ ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡಿದ್ದಾರೆ.
Advertisement
ಮಡಿಕೇರಿಯವರಾದ ಪ್ರಮೋದ್ ಬೋಪಣ್ಣ ಕ್ರೇಜಿಸ್ಟಾರ್ ರವಿಚಂದ್ರನ್ ಅಪ್ಪಟ ಅಭಿಮಾನಿಯಾಗಿದ್ದರು. ಇವರು ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳಲು ಕನಸು ಕಂಡಿದ್ದು ಮೂರನೇ ತರಗತಿಯಲ್ಲಿರುವಾಗ. ಅದಕ್ಕೂ ಕಾರಣ ಕ್ರೇಜಿಸ್ಟಾರ್ ರವಿಚಂದ್ರನ್ ಅವರಂತೆ. ಮೂರನೇ ತರಗತಿಯಲ್ಲಿರುವಾಗ ಮಡಿಕೇರಿಯಲ್ಲಿ ರವಿಚಂದ್ರನ್ ಅಭಿನಯದ ಚಿನ್ನ ಚಿತ್ರದ ಶೂಟಿಂಗ್ ನೋಡಿ ಸಿನಿಮಾದಲ್ಲಿ ನಟನೆ ಮಾಡಬೇಕು ಎಂದು ಕನಸು ಕಂಡು ಆ ಕನಸಿನ ಸಾಕಾರದ ಹಾದಿಯಲ್ಲಿ ಹೆಜ್ಜೆ ಇಡುತ್ತಿರುವ ಪ್ರಮೋದ್ ಬೋಪಣ್ಣ, ಸ್ಯಾಂಡಲ್‍ವುಡ್ ಅಂಗಳದಲ್ಲಿ ಭರವಸೆ ಮೂಡಿಸುತ್ತಿರುವ ಉದಯೋನ್ಮುಕ ನಟನಾಗಿ ಮಿಂಚುತ್ತಿದ್ದಾರೆ.
Advertisement
Advertisement
ಸಿನಿಮಾ ಬಿಟ್ಟು ಬೇರೇನೂ ಆಲೋಚನೆ ಮಾಡದ ಪ್ರಮೋದ್ ಬೋಪಣ್ಣ ನಿರೂಪಕನಾದರೆ ಎಲ್ಲರೂ ನೋಡುತ್ತಾರೆ ನಟನಾಗುವ ಅವಕಾಶ ಸಿಗಬಹುದೆಂದು ಆರಂಭದಲ್ಲಿ ಲೋಕಲ್ ಚಾನೆಲ್ ಗಳಲ್ಲಿ ಆಂಕರ್ ಆಗಿ ಕೆಲಸಕ್ಕೆ ಸೇರಿಕೊಂಡರು. ಅದಾದ ನಂತರ ಉದಯ ವಾಹಿನಿಯಲ್ಲಿ ಒಂಭತ್ತು ವರ್ಷಗಳ ಕಾಲ ಸುದ್ದಿ ನಿರೂಪಕನಾಗಿ ಕೆಲಸ ನಿರ್ವಹಿಸಿದ್ದರು, ಆದರೂ ಸಿನಿಮಾ ನಟನಾಗಬೇಕೆಂಬ ತುಡಿತ ಮಾತ್ರ ಇಂಗಿರಲಿಲ್ಲ, ಹಾಗಾಗಿ ಕೆಲಸಕ್ಕೆ ಫುಲ್ ಸ್ಟಾಪ್ ಇಟ್ಟು ಕಿರುತೆರೆಗೆ ಪ್ರವೇಶಿಸಿದ್ದರು. ಕಿರುತೆರೆಯಲ್ಲಿ ರಾಘವೇಂದ್ರ ಮಹಿಮೆ, ಸಮರ್ಥ ಸದ್ಗುರು ಸಾಯಿಬಾಬಾ, ರಂಗೋಲಿ, ಸುಕನ್ಯಾ ಧಾರಾವಾಹಿಗಳಲ್ಲಿ ಕಲಾವಿದನಾಗಿ ಗುರುತಿಸಿಕೊಂಡಿದ್ದರು.
Advertisement
ಇದೀಗ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟಿರೋ ಪ್ರಮೋದ್ ಬೋಪಣ್ಣ ಈಗ ಸಿನಿಮಾ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. `ಅಂದುಕೊಂಡಂತೆ’, `ಮರೆಯದೇ ಕ್ಷಮಿಸು’, `ಬಳೆಪೇಟೆ’, ಚಿತ್ರದಲ್ಲಿ ಪ್ರಮೋದ್ ಬೋಪಣ್ಣ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಈ ಮೂರೂ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಎರಡು ತಮಿಳು ಸಿನಿಮಾಗಳಲ್ಲೂ ಪ್ರಮೋದ್ ಬೋಪಣ್ಣ ಬಣ್ಣ ಹಚ್ಚಿದ್ದಾರೆ. ಇದಲ್ಲದೆ ಇನ್ನೂ ಕೆಲ ಸಿನಿಮಾ ಆಫರ್‍ಗಳು ಪ್ರಮೋದ್ ಬೋಪಣ್ಣ ಕೈಯಲ್ಲಿವೆ. ಸಿನಿಮಾ ಜೊತೆಗೆ ಕ್ಲೈಮ್ಯಾಕ್ಸ್ ಎಂಬ ಕಿರುಚಿತ್ರದಲ್ಲಿಯೂ ಪ್ರಮೋದ್ ಬೋಪಣ್ಣ ನಟಿಸಿದ್ದಾರೆ. ಬಾಲ್ಯದ ಕನಸಿಗೆ ನೀರೆರೆಯುತ್ತಾ ಒಂದೊಂದೇ ಹೆಜ್ಜೆ ಇಡುತ್ತಿರುವ ಪ್ರಮೋದ್ ಬೋಪಣ್ಣ ಚಿತ್ರರಂಗದಲ್ಲಿ ಸ್ಟಾರ್ ಆಗಿ ಮಿಂಚಬೇಕು ಎಂಬ ಮಹಾದಾಸೆ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಹಗಲಿರುಳು ಪರಿಶ್ರಮ ಪಡುತ್ತಿರುವ ಪ್ರಮೋದ್ ಬೋಪಣ್ಣ ಖಂಡಿತ ಚಿತ್ರರಂಗದ ಭರವಸೆಯ ನಟನಾಗುವುದರಲ್ಲಿ ಯಾವುದೇ ಸಂಶಯವಿಲ್ಲ.