– ಯುವಕನ ಸಾವಿನ ಸುತ್ತ ಅನುಮಾನದ ಹುತ್ತ
ಚಂಡೀಗಢ: ಎರಡು ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯುವಕ ಹರಿಯಾಣದ ಸೋನಿಪತ್ ಜಿಲ್ಲೆಯ ಮಥುರಲಾದ ಒಮೆಕ್ಸ್ ಸಿಟಿಯ ಫ್ಲ್ಯಾಟ್ ನಲ್ಲಿ ವಾಸವಾಗಿದ್ದನು.
ನೀರಜ್ ಸಾವನ್ನಪ್ಪಿದ ಯುವಕ. ನೀರಜ್ ಮೂಲತಃ ದೆಹಲಿಯ ಮೂಲದ ಟಿಕಾರಿ ಮೂಲದವನಾಗಿದ್ದ ಎಂದು ತಿಳಿದು ಬಂದಿದೆ. ಆತನ ಪತ್ನಿಯ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ ಎಂದು ನೀರಜ್ ಕುಟುಂಬಸ್ಥರು ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದೆ ಪತ್ನಿಯ ಸಂಬಂಧಿಕರು ಜೀವ ಬೆದರಿಕೆ ಹಾಕಿದ್ದರು ಎಂದು ವರದಿಯಾಗಿದೆ. ಘಟನೆ ಸಂಬಂಧ ನೀರಜ್ ಮಾವ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಎರಡು ತಿಂಗಳ ಹಿಂದೆ ಮಗ ಯುವತಿಯನ್ನ ಪ್ರೀತಿಸಿ ಮದುವೆ ಆಗಿದ್ದನು. ಯುವತಿ ಕುಟುಂಬಸ್ಥರು ಮಗನಿಗೆ ಜೀವ ಬೆದರಿಕೆ ಸಹ ಹಾಕಿದ್ದರು. ಬೆದರಿಕೆ ಹಿನ್ನೆಲೆ ನೀರಜ್ ಭಯಗೊಂಡಿದ್ದನು. ಇದೀಗ ಆತನ ಮನೆಯಲ್ಲಿ ಶವ ಸಿಕ್ಕಿದೆ ಎಂದು ನೀರಜ್ ಕುಟುಂಬಸ್ಥರು ಹೇಳಿದ್ದಾರೆ.
ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಾಣಿಸುತ್ತಿದೆ. ಶವವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಮೃತ ನೀರಜ್ ಖಾಸಗಿ ಕಂಪನಿಯ ಡೆಲೆವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದನು. ಮದುವೆ ಬಳಿಕ ಪತ್ನಿ ಜತೆ ಒಮೆಕ್ಸ್ ಸಿಟಿಯ ಫ್ಲ್ಯಾಟ್ ನಲ್ಲಿ ವಾಸವಾಗಿದ್ದನು ಎಂದು ಎಎಸ್‍ಐ ವಿಜೇಂದ್ರೆ ಹೇಳಿದ್ದಾರೆ.