ದಾವಣಗೆರೆ: ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆಯ ಮೃತದೇಹ ಪತ್ತೆಯಾಗಿದ್ದು, ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎಂದು ಯುವತಿಯ ಪೋಷಕರು ಆರೋಪ ಮಾಡಿದ್ದಾರೆ.
ಜಿಲ್ಲೆಯ ಹೊಸ ಕುಂದವಾಡ ಗ್ರಾಮದ ನಿವಾಸಿ ರೂಪಾಗೆ (25) ಕಳೆದ ಡಿಸೆಂಬರ್ 10ರಂದು ದಾವಣಗೆರೆ ತಾಲೂಕಿನ ಹನುಮನಹಳ್ಳಿ ಗ್ರಾಮದ ಯುವಕ ಜಯಪ್ರಕಾಶ್ ಜೊತೆ ಮದುವೆಯಾಗಿತ್ತು. ಯುವತಿಯ ಕಡೆಯವರು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದು, ಹತ್ತು ತೊಲೆ ಬಂಗಾರದ ಒಡವೆ, ಲಕ್ಷಾಂತರ ರೂಪಾಯಿ ಹಣವನ್ನು ವರದಕ್ಷಿಣೆಯಾಗಿ ನೀಡಿ, ಮಗಳ ವಿವಾಹ ಮಾಡಿದ್ದರು. ಆದರೆ ಮದುವೆಯಾಗಿ 6 ತಿಂಗಳು ಕಳೆದಿಲ್ಲ, ಜಯಪ್ರಕಾಶ್ ಗೆ ರೂಪಾ ಮೇಲೆ ಅನುಮಾನ ಶುರುವಾಗಿದೆ.
Advertisement
Advertisement
ಯಾರೋ ಪದೇ ಪದೇ ಫೋನ್ ಮಾಡುತ್ತಾರೆ. ಆತನಿಗೂ ನಿನಗೂ ಏನು ಸಂಬಂಧ ಎಂದು ಅನುಮಾನ ಪಟ್ಟಿದ್ದಾನೆ. ಅಲ್ಲದೆ ಆಕೆಯ ಬಳಿ ಇರುವ ಫೋನ್‍ನ್ನು ಒಡೆದು ಹಾಕಿ, ಮುದ್ದಾದ ಮಡದಿಯ ಮೇಲೆ ಅನುಮಾನ ಪಟ್ಟಿದ್ದಾನೆ. ಅಲ್ಲದೆ ಅಪ್ಪ, ಅಮ್ಮನಿಗೂ ಕರೆ ಮಾಡಬಾರದು ಎಂದು ಷರತ್ತು ವಿಧಿಸಿ, ಕಿರುಕುಳ ನೀಡುತ್ತಿದ್ದ. ಇದೀಗ ನಮ್ಮ ಮಗಳನ್ನು ಹೊಡೆದು, ಕೊಲೆ ಮಾಡಿದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಥೆ ಕಟ್ಟುತಿದ್ದಾರೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ.
Advertisement
Advertisement
ರೂಪಾ ಪೋಷಕರಿಗೆ ಕರೆ ಮಾಡಿ, ಬೇರೊಬ್ಬನ ಜೊತೆ ಮಾತನಾಡುತ್ತಿದ್ದೀಯಾ ಎಂದು ನನ್ನ ಪತಿ ಆರೋಪ ಮಾಡುತ್ತಿದ್ದಾರೆ. ಅನುಮಾನ ಪಡುತ್ತಿದ್ದಾರೆ, ಆದರೆ ನಾನು ಯಾವುದೇ ಕಾರಣಕ್ಕೂ ಸಾಯುವುದಿಲ್ಲ. ಧೈರ್ಯವಾಗಿ ಎದುರಿಸಿ ನನ್ನ ಕಳಂಕವನ್ನು ನಾನೇ ತೊಳೆದುಹಾಕುತ್ತೇನೆ ಎಂದು ತಾಯಿ ನಿರ್ಮಾಲಾಗೆ ಕರೆ ಮಾಡಿ ರೂಪಾ ಹೇಳಿದ್ದಳಂತೆ. ಅಲ್ಲದೆ ಕಳೆದ ಸೋಮವಾರ ತಂದೆ ಮಂಜುನಾಥ್ ಕೂಡ ಮಗಳ ಮನೆಗೆ ಹೋಗಿ ನೋಡಿಕೊಂಡು ಬಂದಿದ್ದರಂತೆ. ಆಗ ಚನ್ನಾಗಿದ್ದ ಮಗಳು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳುತ್ತಿದ್ದಾರೆ. ತವರು ಮನೆಗೂ ಕಳುಹಿಸದೆ, ಪದೇ ಪದೇ ಹಲ್ಲೆ ನಡೆಸುತ್ತಿದ್ದ. ಅಲ್ಲದೆ 2 ಎಕರೆಗೆ ಅಡಿಕೆ ಸಸಿ ನೆಡಬೇಕು, ಎರಡು ಲಕ್ಷ ರೂ. ತರುವಂತೆ ಪತಿ ಜಯಪ್ರಕಾಶ್ ಪೀಡಿಸುತ್ತಿದ್ದ ಎಂದು ತನ್ನ ತಾಯಿ ಬಳಿ ರೂಪಾ ಹೇಳಿಕೊಂಡಿದ್ದಳಂತೆ.
ಬಾಳಿ ಬದುಕಬೇಕೆಂದು ಬೆಟ್ಟದಷ್ಟು ಕನಸು ಕಂಡವಳು ಈಗ ಬಾರದ ಲೋಕಕ್ಕೆ ಹೋಗಿದ್ದಾಳೆ. ವರದಕ್ಷಿಣೆ ಕಿರುಕುಳ ಹಾಗೂ ಅನುಮಾನದಿಂದ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ. ತಹಶೀಲ್ದಾರ್ ಗಿರೀಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯ ಪತಿ ಹಾಗೂ ಸಂಬಂಧಿಕರು ತಲೆಮರೆಸಿಕೊಂಡಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗುತ್ತಿದೆ.