ಹಾವೇರಿ: ಶಾಸಕ ನೆಹರು ಓಲೇಕಾರ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಇಬ್ಬರು ಅಭಿಮಾನಿಗಳು ನೀರಿನ ಟ್ಯಾಂಕ್ ಏರಿದ ಘಟನೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದ ಬಳಿ ನಡೆದಿದೆ.
ನೀರಿನ ಟ್ಯಾಂಕ್ ಏರಿದ ಅಭಿಮಾನಿಗಳನ್ನು ಭೀಮನಗೌಡ ಮತ್ತು ಚಂದ್ರಶೇಖರ್ ಎಂದು ಗುರುತಿಸಲಾಗಿದ್ದು, ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಶಾಸಕ ಓಲೇಕಾರ ಪರ ಘೋಷಣೆ ಕೂಗುತ್ತಾ, ಬಿಜೆಪಿ ಬಾವುಟ ಹಿಡಿದು, ಟ್ಯಾಂಕ್ ಮೇಲೆ ನಿಂತು ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ. ಸಚಿವ ಸ್ಥಾನ ಸಿಗೋವರೆಗೂ ನೀರಿನ ಟ್ಯಾಂಕ್ ನಿಂದ ಕೆಳಗೆ ಇಳಿಯೋದಿಲ್ಲ ಎಂದು ಪಟ್ಟು ಹಿಡಿದಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾವೇರಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಟ್ಯಾಂಕ್ ನಿಂದ ಇಳಿಯುವಂತೆ ಮನವೊಲಿಕೆ ಮಾಡಿದರು.
ಸ್ಥಳಕ್ಕೆ ತಹಶೀಲ್ದಾರ್ ಗಿರೀಶ್ ಸ್ವಾದಿ ಹಾಗೂ ಪಿಎಸ್‍ಐ ಹೊಸಮನಿ ಭೇಟಿ ನೀಡಿ ಮನವೊಲಿಕೆ ನಂತರ ಟ್ಯಾಂಕ್‍ನಿಂದ ಇಬ್ಬರು ಕೆಳಗೆ ಇಳಿದರು. ತಹಶೀಲ್ದಾರ್ ಗಿರೀಶ್ ಸ್ವಾದಿ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಗೆ ಮನವಿ ಸಲ್ಲಿಸಿದರು. ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.