ನೆರೆ ಸಂತ್ರಸ್ತರಿಗೆ ಬಿಡಿಗಾಸಿನ ಪರಿಹಾರ – 2 ವರ್ಷದ ಹಿಂದೆ 10 ಸಾವಿರ, ಈಗ ಕೇವಲ 3,800 ರೂ.

Public TV
6 Min Read
flood 2

– ರಕ್ಕಸ ನೆರೆಯಿಂದ ಬೀದಿಗೆ ಬಂದ ಬದುಕು – ತಿನ್ನಲು ಊಟ ಇಲ್ಲ, ಮಲಗಲು ಸೂರಿಲ್ಲ
– ದೆಹಲಿಯಲ್ಲಿ ಸಿಎಂ ಕಾಲಹರಣ – ಸನ್ಮಾನ ಕಾರ್ಯಕ್ರಮಗಳಲ್ಲೇ ಬೊಮ್ಮಾಯಿ ಬ್ಯುಸಿ

ಬೆಂಗಳೂರು: ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ ಇದೇ ಬಿಜೆಪಿ ಸರ್ಕಾರ ತುರ್ತು 10 ಸಾವಿರ ರೂ. ಪರಿಹಾರ ಘೋಷಿಸಿತ್ತು. ಆದ್ರೆ ಈ ವರ್ಷ ಏಕವ್ಯಕ್ತಿ ಬಿಜೆಪಿ ಸರ್ಕಾರ 3,800 ರೂ. ಘೋಷಣೆ ಮಾಡಿದೆ. ಆದ್ರೆ ಈ ಘೋಷಣೆ ಕೇವಲ ಪೇಪರ್ ಗಳಲ್ಲಿಯೇ ಉಳಿದಿದ್ದು, ಕೊಡೋ ಹಣವನ್ನ ಸರಿಯಾಗಿ ನೀಡಿ ಎಂದು ಪ್ರವಾಹದಲ್ಲಿ ಮನೆ, ಆಸ್ತಿ ಕಳೆದುಕೊಂಡ ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ.

ಈ ಕಷ್ಟಗಳ ಪರಿಹಾರಕ್ಕೆ ಮುಂದಾಗಿರಬೇಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ ದೆಹಲಿಯಲ್ಲಿಯೇ ಠಿಕಾಣಿ ಹೂಡಿದ್ದಾರೆ. ಸಂಪುಟ ರಚನೆ ಮತ್ತು ಸನ್ಮಾನ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳು ಬ್ಯುಸಿಯಾಗಿದ್ದಾರೆ. 2019ರಲ್ಲಿ ಪ್ರವಾಹದಿಂದಾಗಿ ನೀರು ನುಗ್ಗಿದ್ದ ಮನೆಗಳಿಗೆ ಸರ್ಕಾರ 10 ಸಾವಿರ ರೂ. ಪರಿಹಾರ ನೀಡಿತ್ತು. ಈ ಬಾರಿ ಕೇವಲ 3,800 ರೂ. ಪರಿಹಾರ ನೀಡಲು ಮುಂದಾಗಿದೆ. ಹೋಗ್ಲಿ ಅದಾದ್ರೂ ಸಿಕ್ಕಿದ್ಯಾ ಅಂದ್ರೆ ಅದೂ ಇಲ್ಲ. ಅಧಿಕಾರಿಗಳು ಮಾತ್ರ ಸರ್ವೆ ಕಾರ್ಯ ನಡೆಸಿ, ಎನ್‍ಡಿಆರ್‍ಎಫ್ ತಂಡದ ಮಾರ್ಗಸೂಚಿ ಪ್ರಕಾರ ಆಹಾರ ಸಾಮಗ್ರಿ ಹಾಗೂ ಬಟ್ಟೆ ಬರೆಗಾಗಿ 3,800 ರೂ. ಪರಿಹಾರ ಕೊಡ್ತೀವಿ ಅಂತ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಸಂತ್ರಸ್ತರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.

flood 4

ಚಿಕ್ಕೋಡಿ ತಾಲೂಕಿನ 11 ಗ್ರಾಮ, ರಾಯಬಾಗ ತಾಲೂಕಿನ 18 ಗ್ರಾಮ, ಅಥಣಿ ತಾಲೂಕಿನ 22 ಗ್ರಾಮ, ಕಾಗವಾಡ ತಾಲೂಕಿನ 7 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಇದುವರೆಗೂ ಒಟ್ಟು 45 ಸಾವಿರಕ್ಕೂ ಹೆಚ್ಚಿನ ಜನರನ್ನ ಸ್ಥಳಾಂತರ ಮಾಡಲಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದ ಜಮೀನು ಜಲಾವೃತವಾಗಿದೆ.

flood 3

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಳಿ, ಗಂಗಾವಳಿ, ಅಘನಾಶಿನಿ, ವರದಾ ನದಿ ಪ್ರವಾಹದಿಂದ ಜಿಲ್ಲೆಯ ಅಂಕೋಲ, ಕಾರವಾರ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಹಳಿಯಾಳ ಭಾಗದಲ್ಲಿ 737.54 ಕೋಟಿಗೂ ಹೆಚ್ಚು ನಷ್ಟವಾಗಿದೆ. 123 ಗ್ರಾಮಗಳು ಸಂಪೂರ್ಣ ಜಲಾವೃತವಾಗಿ 19 ಸಾವಿರಕ್ಕೂ ಹೆಚ್ಚು ಜನ ತೊಂದರೆಗೊಳಗಾಗಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನೆಲಕ್ಕುರುಳಿದರೆ ಅಲ್ಪ ಪ್ರಮಾಣದಲ್ಲಿ ಹಾನಿಯಾದ ಮನೆಗಳು ಸಹ ಸಾವಿರದ ಸನಿಹವಿದೆ. ಸಿಎಂ ಭೇಟಿ ನಂತರ ತಕ್ಷಣದಲ್ಲಿ ಜಾರಿ ಬರುವಂತೆ 3800 ಎನ್.ಡಿ.ಆರ್.ಎಫ್ ನಿಂದ, 6200 ರಾಜ್ಯ ಸರ್ಕಾರದಿಂದ ಒಟ್ಟು -10ಸಾವಿರ ತಕ್ಷಣದ ಪರಿಹಾರ ನೀಡಬೇಕಿತ್ತು. ಆದ್ರೆ ಇದುವರೆಗೂ ಚೇತರಿಕೆಯ ಪರಿಹಾರದ ಜೊತೆ ಸರ್ವೆ ಕಾರ್ಯ ಸಹ ವಿಳಂಬವಾಗಿದೆ.

flood 5

ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭ ಹಾಗೂ ಘಟಪ್ರಭ ಪ್ರವಾಹಕ್ಕೆ ಸಿಕ್ಕು, 48 ಗ್ರಾಮಗಳು ಜಲಾವೃತವಾಗಿವೆ. ಕಾಳಜಿ ಕೇಂದ್ರಗಳನ್ನ ತೆರೆದು, 7061 ಜನ್ರಿಗೆ ಊಟ ಉಪಹಾರ ವ್ಯವಸ್ಥೆ ಮಾಡಲಾಗಿದೆ. 9 ಸಾವಿರದ 17 ಹೆಕ್ಟೇರ್ ಬೆಳೆ ಲಾಸ್ ಆಗಿದೆ. 84 ಮನೆಗಳು ಭಾಗಶಃ ಬಿದ್ದಿದ್ರೆ, 11 ಜಾನುವಾರುಗಳ ಸಾವಾಗಿವೆ. ಆದ್ರೆ ಈ ವರೆಗೆ ಮನೆ ಬಿದ್ದವರಿಗೆ ಹಾಗೂ ಪ್ರವಾಹಕ್ಕೆ ತುತ್ತಾದ ಗ್ರಾಮಸ್ಥರಿಗೆ ಈ ವರೆಗೂ ಯಾವುದೇ ತುರ್ತು ಪರಿಹಾರ ಸಿಕ್ಕಿಲ್ಲ. ಬಾಗಲಕೋಟೆಯಲ್ಲಿ ಘಟಪ್ರಭಾ ನದಿಯ ಪ್ರವಾಹ ಕೊಂಚ ತಗ್ಗಿದೆ. ಆದ್ರೆ ಪ್ರವಾಹಕ್ಕೆ ಡಾಂಬರ್ ರಸ್ತೆ, ವಿದ್ಯುತ್ ಕಂಬಗಳು ಕೊಚ್ಚಿ ಹೋಗಿವೆ. ಮುಧೋಳ ನಗರದ ಯಾದವಾಡ ಸೇತುವೆ ಬಳಿ ಘಟನೆ ನಡೆದಿದೆ. ಸುಮಾರು ಐದಾರು ದಿನಗಳಿಂದ ಯಾದವಾಡ ಸೇತುವೆ ಜಲಾವೃತವಾಗಿತ್ತು. ಪ್ರವಾಹ ತಗ್ಗಿದ ಹಿನ್ನೆಲೆಯಲ್ಲಿ ಸೇತುವೆ ಕೊಂಚ ತೆರವಾಗಿದೆ. ಆದ್ರೆ ಪ್ರವಾಹಕ್ಕೆ ಸೇತುವೆ ಬಳಿಯ ಡಾಂಬರ್ ರಸ್ತೆ. ಸೇತುವೆ ಪಕ್ಕದ ಹೊಲಗದ್ದೆಗಳಲ್ಲಿದ್ದ ವಿದ್ಯುತ್ ಕಂಬಗಳು ಪ್ರವಾಹದಿಂದ ಮಾಯವಾಗಿವೆ.

flood 6

ಕಳೆದ 2019ರಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಧಾರವಾಡದ ಹಲವು ಬಡಾವಣೆಗಳು ಜಲಾವೃತಗೊಂಡಿದ್ದವು. ಇದರಲ್ಲಿ ನಗರದ ಗೌರಡ ಕಾಲೋನಿ ಕೂಡಾ ಒಂದು. ಆಗ ಜಲಾವೃತಗೊಂಡಿದ್ದ ಹಾಗೂ ಮಳೆ ನೀರು ನುಗ್ಗಿದ್ದ ಮನೆಗಳಿಗೆ ಸರ್ಕಾರ 10 ಸಾವಿರ ಪರಿಹಾರ ಕೊಟ್ಟಿತ್ತು. ಈ ಬಾರಿ ಕುಡಾ ಅದೇ ರೀತಿಯ ಮಳೆ ಬಂದು ಅದೇ ಕಾಲೋನಿ ಹಾನಿಯಾಗಿದೆ. ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ. ಈ ಕಾಲೋನಿಗೆ ನಾಲ್ಕು ಗ್ರಾಮಗಳಿಂದ ನೀರು ಬರುತ್ತೆ. 30 ಮನೆಗಳಿಗೆ ನೀರು ನುಗ್ಗಿ ರೇಷನ್ ಸೇರಿದಂತೆ ಎಲ್ಲವೂ ಹಾಳಾಗಿದೆ. ಊಟಕ್ಕೂ ಕೂಡಾ ಏನೂ ಇಲ್ಲದೇ ಜನ ಗೊಳಾಡ್ತಿದ್ದಾರೆ.

bij flood

ನಾರಾಯಣಪುರ ಜಲಾಶಯದಿಂದ 4 ಲಕ್ಷ 20 ಸಾವಿರ ಕ್ಯೂಸೆಕ್ ನೀರನ್ನ ಕೃಷ್ಣಾ ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ 107 ಗ್ರಾಮಗಳು ಪ್ರವಾಹ ಭೀತಿಯನ್ನ ಎದುರಿಸುತ್ತಿವೆ. ದೇವದುರ್ಗ ತಾಲೂಕಿನ 13 ಗ್ರಾಮಗಳಲ್ಲಿ ಅಂಜಳ ಹಾಗೂ ಕೊಪ್ಪರ ಗ್ರಾಮಕ್ಕೆ ಈಗಾಗಲೇ ನೀರು ನುಗ್ಗಿದೆ. ಗ್ರಾಮಗಳ ನೂರಾರು ಎಕರೆ ಜಮೀನಿನ ಲಕ್ಷಾಂತರ ಎಕರೆ ಬೆಳೆ ಹಾಳಾಗಿದೆ. ನೀರಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಂಭವ ಹಿನ್ನೆಲೆ ಗ್ರಾಮಸ್ಥರು ಆತಂಕ ಎದುರಿಸುತ್ತಿದ್ದಾರೆ. ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟಿದ್ದ ಮೇವು ಸಹ ನದಿಗೆ ಕೊಚ್ಚಿಕೊಂಡು ಹೋಗುತ್ತಿದೆ. ವರುಣನ ಅರ್ಭಟಕ್ಕೆ ಗಡಿ ಜಿಲ್ಲೆ ಬೆಳಗಾವಿ ಜಿಲ್ಲೆಯ ಹಲವಾರು ಸೇತುವೆಗಳು ಸಂಪರ್ಕ ಕಳೆದುಕೊಂಡಿದ್ದವು. ಮಳೆ ಕಡಿಮೆಯಾಗಿ ಒಂದು ವಾರ ಕಳೆದರೂ ಕೂಡ ಸೇತುವೆಗಳು ಸೇವೆಗೆ ಸಿದ್ಧವಾಗಿಲ್ಲ, ಕಾರಣ ನದಿ ನೀರಿನ ರಭಸಕ್ಕೆ ಕೆಲ ಸೇತುವೆಗಳು ಕೊಚ್ಚಿ ಹೋಗಿವೆ. ಇನ್ನು ಕೆಲ ಸೇತುವೆಗಳು ಸರಿ ಸುಮಾರು ಹದಿನೈದು ದಿನಗಳು ನೀರಿನಲ್ಲಿ ನಿಂತು ಶಿಥಿಲಾವಸ್ಥೆಯಲ್ಲಿವೆ.

Bommai Flood 2

ಹಾವೇರಿ ಜಿಲ್ಲೆಯಲ್ಲಿ ನದಿಗಳು ಜಲಪ್ರಳಯವನ್ನೆ ಸೃಷ್ಟಿಸಿವೆ. ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿ, ಮನೆಗಳು ಜಲಾವೃತ ಆಗಿವೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳಂತೂ ನೀರಿನಲ್ಲಿ ಹೋಮ ಮಾಡಿದಂತಾಗಿವೆ. ಶೇಂಗಾ, ಭತ್ತ, ಸೋಯಾಬಿನ್, ಮೆಕ್ಕೆಜೋಳ, ಹತ್ತಿ, ಕಬ್ಬು, ಪೇರಲ ತೋಟ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ಕೊಳೆತು ಹಾಳಾಗಿವೆ. ಜಮೀನುಗಳು ಮಾತ್ರವಲ್ಲ ನದಿಯ ನೀರಿನ ಆರ್ಭಟಕ್ಕೆ ಕಡಿತಗೊಂಡಿದ್ದ ಸಂಪರ್ಕ ರಸ್ತೆಗಳು ಸಂಪೂರ್ಣ ಕಿತ್ತು ಹೋಗಿವೆ. ಅದ್ರಲ್ಲೂ ಹಾವೇರಿಯಿಂದ ದೇವಗಿರಿ ಮಾರ್ಗವಾಗಿ ಸವಣೂರು, ಗದಗ, ಲಕ್ಷ್ಮೇಶ್ವರ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸ್ತಿದ್ದ ರಸ್ತೆ ಅಪಘಾತಕ್ಕೆ ಆಹ್ವಾನ ನೀಡುವಂತಿದೆ.

ವಿಜಯಪುರದಲ್ಲಿ ಆಲಮಟ್ಟಿ ಡ್ಯಾಂನ ಒಳ ಹರಿವು ಹಾಗೂ ಹೊರ ಹರವಿನಲ್ಲಿ ಹೆಚ್ಚಳವಾಗಿದೆ. 519.60 ಮೀಟರ್ ಸಾಮಥ್ರ್ಯದ ಡ್ಯಾಂಗೆ 4.21 ಲಕ್ಷ ಕ್ಯೂಸೆಕ್ ಒಳ ಹರಿವು ಇದ್ರೆ 4.20 ಲಕ್ಷ ಕ್ಯೂ ಸೆಕ್ ನೀರು ಹೊರ ಹರಿವಿದೆ. ಆಲಮಟ್ಟಿ ಡ್ಯಾಂನಿಂದ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವ ಸಾಗರಕ್ಕೆ ನೀರು ಹರಿಬಿಡಲಾಗ್ತಿದ್ದು ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ. ಆಲಮಟ್ಟಿ ಡ್ಯಾಂ ಹೊರ ಹರಿವು ಹಾಗೂ ಬಸವ ಸಾಗರದ ಹಿನ್ನೀರಿನ ಕಾರಣ ಪ್ರವಾಹ ಭೀತಿ ಮನೆ ಮಾಡಿದೆ. ಮುದ್ದೇಬಿಹಾಳ ತಾಲೂಕಿನ ಕಮ್ಮಲದಿನ್ನಿ, ಕುಂಚಗನೂರು, ಗಂಗೂರು, ಜೇವೂರು, ತಂಗಡಗಿ ಗ್ರಾಮಗಳಲ್ಲಿ ಪ್ರವಾಹ ಭೀತಿ ಇದೆ.

ವಿಜಯಪುರದಲ್ಲಿ ಪ್ರವಾಹದ ನೀರಿನಲ್ಲಿ ಶವಗಳು ತೇಲಿ ಬರ್ತಿವೆ. ಗೋಕಾಕ್ ತಾಲೂಕಿನ ಮೆಳವಂಕಿ ಗ್ರಾಮದ ಬಳಿ ಘಟಪ್ರಭಾ ನದಿಯಲ್ಲಿ ವ್ಯಕ್ತಿಯೊಬ್ಬರ ಶವ ತೇಲಿ ಬಂದಿದೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು, ಚಳ್ಳಕೆರೆ ತಾಲೂಕುಗಳಲ್ಲಿ ಸಾವಿರಾರು ಹೆಕ್ಟೇರ್ ಗಳಷ್ಟು ಜಮೀನಿನಲ್ಲಿ ಈರುಳ್ಳಿ ಹಾಗೂ ಶೇಂಗಾಬೆಳೆ ಬೆಳೆಯಲಾಗಿದೆ. ಆದ್ರೆ ನಿರೀಕ್ಷೆಗಿಂತ ಹೆಚ್ಚಾಗಿ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆ ಹಾಳಾಗಿದೆ. ನೀರಲ್ಲೇ ಈರುಳ್ಳಿ ಕೊಳೆತು ಹೋಗಿದೆ. ಶೇಂಗಾ ಬೆಳೆ ಸಹ ಶೀತ ಹೆಚ್ಚಾಗಿ ಭೂಮಿಯಲ್ಲೇ ಕಮರಿ ಹೋಗಿದೆ. ಹೀಗಾಗಿ ಎಕರೆಗೆ ಅರವತ್ತು ಸಾವಿರದಂತೆ ಬಂಡವಾಳ ಹಾಕಿದ್ದ ರೈತ ತೀವ್ರ ನಷ್ಟ ಅನುಭವಿಸುತ್ತಾ ಕಂಗಾಲಾಗಿದ್ದಾರೆ. ನಿರಂತರವಾಗಿ ಸುರಿದ ವರುಣನ ಆರ್ಭಟಕ್ಕೆ ಈರುಳ್ಳಿ ಕೊಳೆತಿರೋದು ಒಂದೆಡೆಯಾದ್ರೆ, ಅಧಿಕಾರಿಗಳು ಮಾತ್ರ ಈರುಳ್ಳಿಗೆ ತಗುಲಿರುವ ರೋಗಕ್ಕೆ ಮುಕ್ತಿ ನೀಡಲು ಔಶಧಿ ಸಿಂಪಡಿಸಿಕೊಂಡು, ಬೆಳೆ ರಕ್ಷಿಸಿಕೊಳ್ಳಿ ಅಂತಿದ್ದಾರೆ. ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಕೊಡೊಸ್ತೀವಿ ಅನ್ನೊ ಬಗ್ಗೆ ದನಿ ಸಹ ಎತ್ತಿಲ್ಲ. ಇದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *