– ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಚಿಕ್ಕಮಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ಪ್ರಚಾರಕ್ಕೆಂದು ಹೋದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸ್ಥಳಿಯರು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಕಳಸ ತಾಲೂಕಿನ ಜಾಂಬಳೆಯಲ್ಲಿ ನಡೆದಿದೆ.
ಮಂಗಳವಾರ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಕುಮಾರಸ್ವಾಮಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲೇ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವುದರಿಂದ ಪ್ರಚಾರಕ್ಕೆಂದು ಕಳಸ ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಜಾಂಬಳೆ, ಕುದುರೆಮುಖ, ಕೆಂಕನಕೊಂಡ, ಬಿಳಗಲ್ ಹಾಗೂ ನೆಲ್ಲಿಬೀಡು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ನೆಟ್‍ವರ್ಕ್ ಸಮಸ್ಯೆ ಇದೆ ಎಂದು ಸ್ಥಳಿಯರು ಮನವಿ ಮಾಡಿದ್ದರು.
ನೆಟ್‍ವರ್ಕ್ ಸಮಸ್ಯೆ ತುಂಬಾ ಇದೆ. ಮಕ್ಕಳಿಗೆ ಆನ್‍ಲೈನ್ ಶಿಕ್ಷಣಕ್ಕೂ ಕಷ್ಟವಾಗುತ್ತಿದೆ. ಆರೋಗ್ಯ ಸರಿ ಇಲ್ಲದಿದ್ದಾಗ ಗಾಡಿಗಳಿಗೆ ಫೋನ್ ಮಾಡಲು ಸಾಧ್ಯವಾಗುವುದಿಲ್ಲ. ನೆಟ್‍ವರ್ಕ್ ಬೇಕು ಅಂದರೆ ಎಂಟರಿಂದ ಹತ್ತು ಕಿ.ಮೀ ಹೋಗಬೇಕು. ನಮಗೆ ಆದಷ್ಟು ಬೇಗ ನೆಟ್‍ವರ್ಕ್ ಸಮಸ್ಯೆಗೆ ಪರಿಹಾರ ಮಾಡಿಕೊಡಿ ಎಂದು ಮನವಿ ಸಲ್ಲಿಸಿದ್ದರು. ಈ ವೇಳೆ ಸಂಸದೆ ಶೋಭಾ ಕೂಡ ಸಂಬಂಧಪಟ್ಟವರೊಂದಿಗೆ ಮಾತನಾಡಿದ್ದೇನೆ. ಇನ್ನೊಮ್ಮೆ ಮಾತನಾಡುತ್ತೇನೆ ಎಂದಿದ್ದಾರೆ. ಆಗ ನೆರೆದಿದ್ದ ಸ್ಥಳೀಯರಲ್ಲಿ ಕೆಲವರು ನಮ್ಮ ನಿಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಹಾಕಲು ಮನಸ್ಸು ಮಾಡುತ್ತೇವೆ ಎಂದಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ನಾನು ಕರೆದು ಮಾತನಾಡುತ್ತೇನೆ ಎಂದಿದ್ದೇನೆ. ನೀವು ಏಕೆ ಉಲ್ಟಾ ಮಾತನಾಡುತ್ತೀರಾ ಎಂದು ಪ್ರಶ್ನಿಸಿದಾಗ ನೆರೆದಿದ್ದ ಸ್ಥಳೀಯರಲ್ಲೇ ಮಾತಿನ ಚಕಮಕಿ ನಡೆದಿದೆ. ಸಂಸದೆ ಶೋಭಾ ಏಕೆ ಉಲ್ಟಾ ಮಾತನಾಡುತ್ತೀರಾ ಎನ್ನುತ್ತಿದ್ದಂತೆ ಬಿಜೆಪಿ ಬೆಂಬಲಿತರು ಹಾಗೂ ಇತರೆ ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಕಳೆದೊಂದು ವರ್ಷದಿಂದ ತೀವ್ರ ನೆಟ್ವರ್ಕ್ ಸಮಸ್ಯೆಯನ್ನ ಎದುರಿಸಿದ್ದೇವೆ. ಹಲವು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಸಂಸದೆ ಶೋಭಾ ಹಾಗೂ ಶಾಸಕ ಕುಮಾರಸ್ವಾಮಿ ವಿರುದ್ಧ ಅಸಾಮಾಧಾನ ಹೊರಹಾಕಿದ್ದಾರೆ.