– ಆನ್‍ಲೈನ್ ಕ್ಲಾಸಿಗೆ ಗೈರಾಗ್ತಿದ್ದ ವಿದ್ಯಾರ್ಥಿ
– ಶಿಕ್ಷಕಿ ಕಂಡು ವಿದ್ಯಾರ್ಥಿ ಅಚ್ಚರಿ
ತಿರುವನಂತಪುರಂ: ಶಿಕ್ಷಕಿಯೊಬ್ಬರು ತನ್ನ ನೆಚ್ಚಿನ ವಿದ್ಯಾರ್ಥಿಯನ್ನು ಭೇಟಿಯಾಗಲು ಬರೋಬ್ಬರಿ 125 ಕಿ.ಮೀ ಕ್ರಮಿಸಿದ ಘಟನೆಯೊಂದು ಕೇರಳದ ಮರಯೂರ್ ಎಂಬಲ್ಲಿ ನಡೆದಿದೆ.
ಕೋಥಮಂಗಲಂ ಮಾರ್ ಬೆಸಿಲ್ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕಿ ಪ್ರೀತಿ ಎನ್ ಕುರಿಯಾಕೋಸ್ ಅವರು ಏಕಾಏಕಿ ಭೇಟಿ ಮೂಲಕ ವಿದ್ಯಾರ್ಥಿಯನ್ನು ಅಚ್ಚರಿಗೆ ಒಳಪಡಿಸಿದ್ದಾರೆ.
ಕೊರೊನಾ ವೈರಸ್ ನಿಂದಾಗಿ ವಿದ್ಯಾರ್ಥಿಗಳಿಗೆ ಎಲ್ಲೆಡೆ ಆನ್‍ಲೈನ್ ತರಗತಿಗಳನ್ನು ನಡೆಸಲಾಗುತ್ತಿತ್ತು. ಈ ವೇಳೆ ಪ್ರೀತಿ ಅವರ ನೆಚ್ಚಿನ ವಿದ್ಯಾರ್ಥಿ ಪ್ರತಿದಿನ ಗೈರಾಗುತ್ತಿದ್ದನು. ಹೀಗಾಗಿ ಶಿಕ್ಷಕಿ ಆ ವಿದ್ಯಾರ್ಥಿಯನ್ನು ಭೇಟಿ ಮಾಡಲು ಪ್ರಯತ್ನಿಸಿದರು. ಅಲ್ಲದೆ ಮರೂರಿನಲ್ಲಿರುವ ವಿದ್ಯಾರ್ಥಿ ನಿವಾಸಕ್ಕೆ ತೆರಳಲು 125 ಕಿ.ಮೀ ಪ್ರಯಾಣಿಸಿದ್ದಾರೆ.
ಪ್ರೀತಿ ಅವರು ಹಿಂದಿ ಶಿಕ್ಷಕಿಯಾಗಿದ್ದರು. ತಿಂಗಳುಗಳ ಹಿಂದೆ ಆನ್‍ಲೈನ್ ತರಗತಿಗಳು ಪ್ರಾರಂಭವಾಗಿದ್ದರೂ, ಮರಯೂರ್‍ನ 10 ನೇ ತರಗತಿ ವಿದ್ಯಾರ್ಥಿ ಅವರಿಗೆ ಹಾಜರಾಗುತ್ತಿರಲಿಲ್ಲ. ಪ್ರತಿ ಬಾರಿಯೂ ತನ್ನ ಕ್ಲಾಸಿಗೆ ಗೈರಾಗುತ್ತಿದ್ದರಿಂದ ವಿದ್ಯಾರ್ಥಿಯ ಹಿನ್ನೆಲೆಯನ್ನು ಶಿಕ್ಷಕಿ ಕಲೆಹಾಕಿದ್ದಾರೆ. ವಿದ್ಯಾರ್ಥಿ ಅನ್‍ಲೈನ್ ತರಗತಿಗೆ ಹಾಜರಾಗಲು ಎದರಿಸುವ ಸಮಸ್ಯೆ ಬಗ್ಗೆ ಅರಿತುಕೊಂಡರು. ವಿದ್ಯಾರ್ಥಿಗೆ ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಬೇಕಾದ ಸೌಲಭ್ಯಗಳಿಲ್ಲ. ಅಲ್ಲದೆ ಪಠ್ಯಪುಸ್ತಕಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿದುಕೊಂಡರು. ಹೀಗಾಗಿ ಶಿಕ್ಷಕಿ ವಿದ್ಯಾರ್ಥಿಯನ್ನು ವೈಯಕ್ತಿಕವಾಗಿ ಭೇಟಿಯಾಗಲು ತೀರ್ಮಾನಿಸಿದರು. ಅಂತೆಯೇ ಭೇಟಿಗೆ ತೆರಳಿ ಮನೆಮುಂದೆ ನಿಂತಿದ್ದನ್ನು ನೋಡಿ ವಿದ್ಯಾರ್ಥಿ ಆಶ್ವರ್ಯಗೊಳಗಾದನು.
ಭೇಟಿ ವೇಳೆ ಶಿಕ್ಷಕಿ, ವಿದ್ಯಾರ್ಥಿಗೆ ತಾವು ತಂದಿದ್ದ ಹೊಸ ಮೊಬೈಲ್ ಫೋನ್ ಹಾಗೂ ಓದಲು ಬೇಕಾದ ಅಗತ್ಯ ವಸ್ತುಗಳನ್ನು ವಿದ್ಯಾರ್ಥಿಗೆ ನೀಡಿದರು. ಯಾವುದೇ ಹಣದ ಅಪೇಕ್ಷೆ ಇಲ್ಲದೆ ಪ್ರೀತಿಯಿಂದಲೇ ಈ ಎಲ್ಲಾ ವಸ್ತುಗಳನ್ನು ಶಿಕ್ಷಕಿ ತಮ್ಮ ವಿದ್ಯಾರ್ಥಿಗೆ ನೀಡಿದ್ದಾರೆ. ಕಾಂತಲೂರು ಪಂಚಾಯ್ತಿಯ ಪಥಡಿಪಾಲಂ ನಿವಾಸಿಯಾಗಿರುವ ವಿದ್ಯಾರ್ಥಿ, ಬೆಸಿಲ್ ಶಾಲೆ ಬಳಿ ಇರುವ ಅನಾಥಾಶ್ರಮದಲ್ಲಿ ಓದಿಗಾಗಿ ಆಶ್ರಯ ಪಡೆದಿದ್ದನು. ಆದರೆ ಕೊರೊನಾ ಎಂಬ ಸಾಂಕ್ರಾಮಿಕ ರೋಗದಿಂದಾಗಿ ಅದು ಮುಚ್ಚಿತ್ತು.
ಶಾಲೆಯ ದಾಖಲೆ ಪತ್ರಗಳಲ್ಲಿ ನಮೂದಾಗಿದ್ದ ಒಂದು ನಂಬರಿನಿಂದ ನಾನು ವಿದ್ಯಾರ್ಥಿಯನ್ನು ಸಂಪರ್ಕ ಮಾಡಿದೆ. ಆದರೆ ಆ ನಂಬರ್ ಬೇರೆ ಯಾರಿಗೋ ಹೋಯಿತು. ನಂತರ ಮರಯೂರ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ನನ್ನ ಹಳೆಯ ಗೆಳೆಯ ಹೆಚ್ಚುವರಿ ಎಸ್‍ಐ ಎಂಎಂ ಶಮೀರ್ ಅವರ ಸಹಾಯವನ್ನು ಕೋರಿದೆ. 3-4 ದಿನಗಳ ಬಳೀಕ ಅವರು ನನಗೆ ವಿದ್ಯಾರ್ಥಿ ಹಾಗೂ ಆತನ ಕುಟುಂಬವನ್ನು ಪತ್ತೆ ಹಚ್ಚಿ ತಿಳಿಸಿದರು ಎಂದು ಪ್ರೀತಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಸಹಪಾಠಿ ಪೊಲೀಸ್ ಅಧಿಕಾರಿ ಕೂಡ ವಿದ್ಯಾರ್ಥಿಯ ಬಗ್ಗೆ ಮಾಹಿತಿ ಕೇಳಿದಾಗ, ಆನ್ ಲೈನ್ ತರಗತಿಗೆ ಹಾಜರಾಗಲೆಂದು ವಿದ್ಯಾರ್ಥಿಯ ತಂದೆ ಮೊಬೈಲ್ ಕೊಡಿಸಿದ್ದರು. ಆದರೆ ಆತನಿಗೆ ನೆಟ್ ವರ್ಕ್ ಸಮಸ್ಯೆ ಎದುರಾಗಿದ್ದರಿಂದ ತರಗತಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮೊಬೈಲ್ ಅನ್ನು ವಾಪಸ್ ಅಂಗಡಿಗೆ ನೀಡಿರುವ ಕುರಿತು ತಿಳಿದುಬಂತು. ಈ ವಿಚಾರವನ್ನು ಕೂಡ ಅಧಿಕಾರಿ ಶಿಕ್ಷಕಿ ಬಳಿ ತಿಳಿಸಿದ್ದಾರೆ.
ಇಷ್ಟೆಲ್ಲ ಸಮಸ್ಯೆಗಳನ್ನು ಅರಿತ ಶಿಕ್ಷಕಿ, ಒಂದು ನಿಮಿಷನೂ ತಡಮಾಡದೇ ಹೊಸ ಮೊಬೈಲ್ ಖರೀದಿಸಿ, ನೋಟ್ ಬುಕ್ಸ್, ಪಠ್ಯಪುಸ್ತಕ, ಸ್ಕೂಲ್ ಬ್ಯಾಗ್, ಪೆನ್, ಮಾಸ್ಕ್ ಗಳು ಹಾಗೂ ಅಗತ್ಯ ವಸ್ತುಗಳನ್ನು ಹಿಡಿದುಕೊಂಡು ವಿದ್ಯಾರ್ಥಿಯ ಮನೆಯತ್ತ ಪ್ರಯಾಣ ಬೆಳೆಸಿ, ಆತನ ಕೈಗೆ ಹಸ್ತಾಂತರ ಮಾಡಿದರು. ಈ ವೇಳೆ ಶಿಕ್ಷಕಿಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿರುವ ವಿದ್ಯಾರ್ಥಿ, ಚೆನ್ನಾಗಿ ಓದಿ ಒಳ್ಳೆಯ ಅಂಕ ಗಳಿಸುವುದಾಗಿ ಭರವಸೆ ನೀಡಿದ್ದಾನೆ.