ಮಡಿಕೇರಿ: ನೂರಕ್ಕೆ ನೂರರಷ್ಟು ಮೆಡಿಕಲ್ ಕಾಲೇಜಿನ ವೈದ್ಯರು ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರು ಸಾಯುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ವಿ ಸೋಮಣ್ಣ ಗರಂ ಆಗಿ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಇದು ನಡೆಯಿತು.
ಮಡಿಕೇರಿ ನಗರದ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಹಾಗೂ ಸಾವು ನೋವು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಂದು ಡೀನ್ ಮತ್ತು ಸಿಬ್ಬಂದಿ ಜೊತೆ ಸೋಮಣ್ಣ ಸಭೆ ನಡೆಸಿದರು.
ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದ ಸೋಮಣ್ಣ ಕೋವಿಡ್ ಕೇರ್ ಸೆಂಟರ್, ಅಸ್ಪತ್ರೆಗಳ ಪರಿಶೀಲನೆ ಹಾಗೂ ಅರೋಗ್ಯ ಇಲಾಖೆ ಕೆಲಸವನ್ನು ಗಮನಿಸಿ ಮಾಹಿತಿಯನ್ನು ಸಂಗ್ರಹಿಸಿ ಸಭೆಗೆ ಆಗಮಿಸಿದ್ದರು. ಈ ವೇಳೆ, ನೂರರಕ್ಕೆ ನೂರರಷ್ಟು ಮೆಡಿಕಲ್ ಕಾಲೇಜಿನ ವೈದ್ಯರು ಕೆಲಸ ಮಾಡಿಲ್ಲ. ಸರಿಯಾಗಿ ಕೆಲಸ ಮಾಡದಿದ್ದರೆ ಸುಮ್ಮನಿರುವುದಿಲ್ಲ ಎಂದು ಹೇಳಿ ಗರಂ ಆದರು.
ಕೊಡಗು ಜಿಲ್ಲೆಯಲ್ಲಿ ಇರುವ ಜನಸಂಖ್ಯೆ ಅತ್ಯಂತ ಕಡಿಮೆ ಇದೆ. ದಿನನಿತ್ಯ 10 ರಿಂದ 12 ಸಾವುಗಳು ಸಂಭವಿಸುತ್ತಿದೆ. ಇದರಿಂದ ನಮಗೆ ದಿಗಿಲು ಬಡಿದಂತೆ ಅಗುತ್ತಿದೆ. ಸಾವು ನೋವುಗಳ ಸಂಖ್ಯೆ ಕಡಿಮೆ ಮಾಡಲು ಹಗಲು ಇರುಳು ಶ್ರಮಪಡಬೇಕು ಎಂದು ಸೋಮಣ್ಣ ಸೂಚಿಸಿದರು.
ಸಚಿವರ ಸಭೆಗೆ ನಾಲ್ಕು ಮಂದಿ ವೈದ್ಯರು ಗೈರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸುತ್ತಾರೆ ಎಂದು ಗೊತ್ತಿದ್ದರೂ ವಿಚಾರವನ್ನು ಹಗುರವಾಗಿ ತೆಗೆದುಕೊಂಡ ಈ ವೈದ್ಯರಿಗೆ ನೋಟಿಸ್ ನೀಡಬೇಕು. ಮೆಡಿಕಲ್ ಕಾಲೇಜಿನ ಡೀನ್ ಕಾರ್ಯಪ್ಪ ಅವರ ಕಾರ್ಯವೈಖರಿಗೆ ಇದರಲ್ಲೇ ಗೊತ್ತಾಗುತ್ತದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.