ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಸಚಿವರಿಗೆ ಅವರ ಆಸಕ್ತಿಗೆ ತಕ್ಕಂತೆ ಖಾತೆ ಹಂಚಿಕೆ ಮಾಡಿರುವುದು ನಿಜಕ್ಕೂ ಸಂತೋಷವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಜಿಲ್ಲೆಯ ಸಾಗರದಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಪ್ರತಿಭಾವಂತ ನೂತನ ಸಚಿವರು ಅವರಿಗೆ ಸಿಕ್ಕಂತಹ ಖಾತೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಜೊತೆಗೆ ಮುಂಬರುವ 1 ವರ್ಷ 10 ತಿಂಗಳು ರಾಜ್ಯದ ಜನರ ಸೇವೆ ಮಾಡಲು ಒಳ್ಳೆಯ ಅವಕಾಶವಿದ್ದು, ಸಚಿವರುಗಳು ಅದನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಶಿವಮೊಗ್ಗ ಜಿಲ್ಲೆಗೆ ಎರಡು ಪ್ರಮುಖ ಖಾತೆ ಸಿಕ್ಕಿರುವುದು ಜಿಲ್ಲೆಯ ಜನತೆಗೆ ಸಂತೋಷವಾಗಿದೆ. ನನಗೆ ಹಳೆಯ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಮುಂದುವರಿಸಿದ್ದಾರೆ. ನನ್ನ ಅಚ್ಚುಮೆಚ್ಚಿನ ಇಲಾಖೆ ಗ್ರಾಮೀಣಾಭಿವೃದ್ಧಿ ಇಲಾಖೆ ಆಗಿದ್ದು, ಆ ಖಾತೆಯೇ ನನಗೆ ಸಿಕ್ಕಿರುವುದು ಸಂತೋಷವಾಗಿದೆ ಎಂದು ನುಡಿದಿದ್ದಾರೆ.
ಅರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ದೊರೆತಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಗೃಹ ಖಾತೆ ಎರಡು ಖಾತೆಗಳು ಇಡೀ ರಾಜ್ಯಕ್ಕೆ ಸದುಪಯೋಗ ಆಗುವ ರೀತಿ ಪ್ರಯತ್ನ ಮಾಡುತ್ತೇವೆ. ನಮ್ಮ ಜಿಲ್ಲೆಗೂ ಅದರ ಪೂರ್ಣ ಲಾಭ ಪಡೆದುಕೊಳ್ಳುತ್ತೇವೆ. ಇಡೀ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಹೊಸ ಸಚಿವ ಸಂಪುಟ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ