-ಕೋವಿಡ್ ನಿರ್ವಹಣೆಯಲ್ಲಿ ಜವಾಬ್ದಾರಿ ಮೆರೆದ ಎಸ್.ಟಿ ಸೋಮಶೇಖರ್
ಬೆಂಗಳೂರು: “ನುಡಿದಂತೆ ನಡೆದವನ ಅಡಿಗೆನ್ನ ನಮನ” ಎಂಬ ಕವಿವಾಕ್ಯವು ಅಕ್ಷರಶಃ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರಿಗೆ ಅನ್ವಯ, ಅನ್ವರ್ಥವಾಗುತ್ತದೆ ಎಂದು ಯಶವಂತಪುರ ಕ್ಷೇತ್ರದಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್‍ರವರು ಶ್ಲಾಘನೆ ವ್ಯಕ್ತಪಡಿಸಿದರು.
Advertisement
ಯಶವಂತಪುರ ವಿಧಾನಸಭಾ ಕ್ಷೇತ್ರದ ಮಾಗಡಿ ರಸ್ತೆಯ ತಾವರೆಕೆರೆ ವ್ಯಾಪ್ತಿಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಸೋಮಶೇಖರ್ ಅವರು ಕೋವಿಡ್ 19 ನಿಂದ ಮೃತಪಟ್ಟ ಕುಟುಂಬದವರಿಗೆ ವೈಯಕ್ತಿಕವಾಗಿ ನೀಡಲಿರುವ 1 ಲಕ್ಷ ರೂಪಾಯಿ ಸಹಾಯಧನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
Advertisement
ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ಜನ ಆಶೀರ್ವಾದ ಮಾಡಿದ್ದಾರೆ. ಜನ ಸೇವೆಯನ್ನು ಮಾಡಲು ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಎಂದು ಜನತೆಗೆ ಸೋಮಶೇಖರ್‌ರವರು ಮಾತುಕೊಟ್ಟಿದ್ದರು. ಈಗ ಆ ಮಾತನ್ನು ನೆರವೇರಿಸುತ್ತಿರುವುದರಿಂದ ಸಚಿವ ಸೋಮಶೇಖರ್‌ರವರಿಗೆ ನಾನು ರಾಜ್ಯದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.
Advertisement
Advertisement
ಜನಸೇವಕ, ಹೃದಯವಂತ: ಕಷ್ಟದಲ್ಲಿದ್ದವರ ಕಣ್ಣೀರು ಒರೆಸುವುದು, ಅವರ ಕಷ್ಟಕ್ಕಾಗುವುದೇ ನಿಜವಾದ ಭಗವಂತನ ಸೇವೆ ಎಂದು ಸ್ವಾಮಿ ವಿವೇಕಾನಂದರು ಹೇಳಿದಂತೆ, ತಮ್ಮ ಕ್ಷೇತ್ರದಲ್ಲಿ ಜನರ ನೋವಿಗೆ ಸ್ಪಂದಿಸುವ ಮೂಲಕ ಸೋಮಶೇಖರ್ ಅವರು ನಿಜವಾದ ಜನಸೇವಕರಾಗಿದ್ದಾರೆ. ಅವರು ಎಲ್ಲೂ ಪ್ರಚಾರಕ್ಕಾಗಿ ಈ ಕೆಲಸವನ್ನು ಮಾಡಿಲ್ಲ. ಈ ಕಾರಣಕ್ಕಾಗಿ ಶ್ರೀ ಶ್ರೀ ಶ್ರೀ ಆದಿಚುಂಚನಗಿರಿ ಮಠಾಧೀಶರು, ಶ್ರೀ ಶ್ರೀ ಶ್ರೀ ಸುತ್ತೂರು ಜಗದ್ಗರುಗಳು, ಶ್ರೀ ಶ್ರೀ ಶ್ರೀ ಮರುಘಾಶರಣರು, ಶ್ರೀ ಶ್ರೀ ಶ್ರೀ ಚಂದ್ರಶೇಖರ್ ಸ್ವಾಮೀಜಿಯವರು ಸೇರಿದಂತೆ ವಿವಿಧ ಮಠಾಧೀಶರು ಆಗಮಿಸಿದರು. ಚಿತ್ರನಟ ಉಪೇಂದ್ರ ಅವರು ಸೇರಿದಂತೆ ಹಲವಾರು ಜನರು ಬಂದು ಪ್ರಶಂಸೆ ವ್ಯಕ್ತಪಡಿಸಿದರು. ಅವರೆಲ್ಲ ಯಾಕೆ ಬಂದರು ಎಂದರೆ, ಸ್ವಂತಕ್ಕೆ ಸ್ವಲ್ಪ, ಸಮಾಜವೇ ಸರ್ವಸ್ವ ಎಂದು ತಾವು ದುಡಿದಿದ್ದನ್ನು ಸಮಾಜಕ್ಕೆ ಕೊಡುವ ಮೂಲಕ ಹೃದಯ ಶ್ರೀಮಂತಿಕೆ ಅವರಲ್ಲಿದೆ. ತಾಯಿಯ ಹೃದಯ ಅವರಲ್ಲಿದೆ ಎಂದು ಎಲ್ಲರೂ ಬಂದಿದ್ದಾರೆ. ನಾನೂ ಸಹ ಅದೇ ಕಾರಣಕ್ಕೆ ಇಂದು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಕಟೀಲ್ ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಕೊರೊನಾ ಬಗ್ಗೆ ಯಾರೂ ಭಯಗೊಳ್ಳುವುದು ಬೇಡ. ಇದು ಇಡೀ ವಿಶ್ವಕ್ಕೆ ಆವರಿಸಿದೆ. ಆದರೆ, ನಾವು ಧೈರ್ಯದಿಂದ ಇದನ್ನು ಗೆಲ್ಲಬಹುದು. ಆತ್ಮಸ್ಥೈರ್ಯವನ್ನು ತಂದುಕೊಳ್ಳಬೇಕು. ಕಳೆದ ವರ್ಷ ದೇಶಕ್ಕೆ ಕೊರೊನಾ ಕಾಲಿಟ್ಟಾಗ ಸ್ಯಾನಿಟೈಸರ್ ಉತ್ಪಾದನೆ, ಪಿಪಿಇ ಕಿಟ್ ಸೇರಿದಂತೆ ಯಾವುದು ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿರಲಿಲ್ಲ. ಆದರೆ, ಈಗ ಅವೆಲ್ಲವೂ ಆಗುತ್ತಿದೆ. ನಮ್ಮ ಕೇಂದ್ರ ಸರ್ಕಾರ ಇದಕ್ಕೆ ಪ್ರೋತ್ಸಾಹ ನೀಡಿದ್ದಲ್ಲದೆ, ವಿದೇಶಗಳಿಗೂ ರಫ್ತು ಮಾಡುವ ಹಂತಕ್ಕೆ ನಾವು ಬಂದಿದ್ದೇವೆಂದರೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದಲೂ ಸಹಕಾರ: ಇಂದು ಕರ್ನಾಟಕದಲ್ಲಿ ಟೆಸ್ಟಿಂಗ್ ಸೆಂಟರ್ ಗಳನ್ನು ಸಾಕಷ್ಟು ಪ್ರಮಾಣದಲ್ಲಿ ತೆರೆಯಲಾಗಿದೆ. ಅಲ್ಲದೆ, ಇನ್ನು ವೆಂಟಿಲೇಟರ್ ಉತ್ಪಾದನೆ ಸೇರಿದಂತೆ ಹಲವು ಉಪಕರಣಗಳ ಉತ್ಪಾದನೆ ರಾಜ್ಯದಲ್ಲಿ ನಡೆಯುತ್ತಿದೆ. ಕೇಂದ್ರದಿಂದಲೂ ಸಹಕಾರ ದೊರೆಯುತ್ತಿದ್ದು, 45 ಸಾವಿರ ವೆಂಟಿಲೇಟರ್ ಕೊಡುವ ಕೆಲಸವನ್ನು ನಮ್ಮ ಪ್ರಧಾನ ಮಂತ್ರಿಗಳಾದ ಮೋದಿಯವರು ಮಾಡಿದ್ದಾರೆ. ಇನ್ನು ದೇಶದಲ್ಲಿ 9 ಸಾವಿರ ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿದ್ದು, ಕೊರತೆ ಸಹ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರ ಸಚಿವ ಸಂಪುಟ ನೇತೃತ್ವದಲ್ಲಿ ಕೆಲಸ ಮಾಡಿದ್ದರಿಂದ ಅನೇಕ ಉಪಕರಣಗಳ ಉತ್ಪಾದನೆ ಆಗುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.
ಆರ್ ಆರ್ ನಗರ, ಯಶವಂತಪುರಕ್ಕೆ ಪ್ರತ್ಯೇಕ ವಾರ್ ರೂಂ: ಕೋವಿಡ್ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳು ಸಹ ಅನೇಕ ಸೂಚನೆಗಳನ್ನು ನೀಡುತ್ತಾ ಬಂದಿದ್ದಾರೆ. ನನಗೆ ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರದ ಉಸ್ತುವಾರಿಯನ್ನು ನೀಡಿದ್ದು, ದೊಡ್ಡ ಮಟ್ಟದ ಈ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲು ಸೂಚಿಸಿದ್ದಾರೆ. ಅಲ್ಲದೆ, ಆರ್ ಆರ್ ನಗರಕ್ಕೆ ಹಾಗೂ ಯಶವಂತಪುರ ಕ್ಷೇತ್ರಕ್ಕೆ ಪ್ರತ್ಯೇಕ ವಾರ್ ರೂಂ ಅನ್ನು ನಿರ್ಮಿಸಲಾಗಿದೆ. ಯಶವಂತಪುರಕ್ಕೆ 17 ಗ್ರಾಮ ಪಂಚಾಯಿತಿಗಳು ಇರುವುದರಿಂದ ಪ್ರತ್ಯೇಕತೆಯ ಅವಶ್ಯಕತೆ ಇತ್ತು ಎಂದು ಯಶವಂತಪುರ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಸೋಮಶೇಖರ್ ಹೇಳಿದರು.
ನೇರವಾಗಿ ದಾಖಲು: ಚೆನ್ನೇನಹಳ್ಳಿ ಜನಸೇವಾ ಕೇಂದ್ರದಲ್ಲಿ 100 ಬೆಡ್ ಇರುವ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಇಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ಪಾಳಿ ಮೇಲೆ ಯುವ ಪಡೆಯು ಇಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಸೋಂಕಿತರ ಯೋಗಕ್ಷೇಮವನ್ನು ಉತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ. ಇಲ್ಲಿ ಈವರೆಗೆ 105ಕ್ಕೂ ಹೆಚ್ಚು ಮಂದಿ ದಾಖಲಾಗಿದ್ದಾರೆ. ತಮ್ಮ ಮನೆಗಿಂತ ಇಲ್ಲಿ ಹೆಚ್ಚಿನ ಸೌಕರ್ಯ ನೀಡಿ ಉತ್ತಮವಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಸೋಂಕಿತರು ಪ್ರತಿಕ್ರಿಯೆಯನ್ನೂ ಕೊಟ್ಟಿದ್ದಾರೆ. ಜೊತೆಗೆ ಶೀಘ್ರ ಗುಣಮುಖರಾಗಿದ್ದಾಗಿಯೂ ಹೇಳಿಕೊಳ್ಳುತ್ತಿದ್ದಾರೆ. ಜೊತೆಗೆ 370 ಬೆಡ್ ಇರುವ ಜ್ಞಾನಭಾರತಿ ಕೋವಿಡ್ ಕೇರ್ ಸೆಂಟರ್ ನಲ್ಲಿಯೂ ಸಹ ಉತ್ತಮ ನಿರ್ವಹಣೆ ಇದ್ದು, ಈ ಎರಡೂ ಕೇರ್ ಸೆಂಟರ್ ಗೆ ವಾರ್ ರೂಂ ಸಹಾಯದ ಅವಶ್ಯಕತೆ ಇಲ್ಲ. ಸೋಂಕಿತರು ನೇರವಾಗಿ ಹೋಗಿ ದಾಖಲಾಗಬಹುದು ಸಚಿವರಾದ ಸೋಮಶೇಖರ್ ತಿಳಿಸಿದರು.
ಟ್ರಯಾಜ್ ಸೆಂಟರ್ ನಿಂದ ಉಪಯೋಗ: ಮುಖ್ಯಮಂತ್ರಿಗಳಿಂದ ಇತ್ತೀಚೆಗೆ ಟ್ರಯಾಜ್ ಸೆಂಟರ್ ಅನ್ನು ಉದ್ಘಾಟಿಸಲಾಗಿದೆ. ಇಲ್ಲಿ ವೈದ್ಯರು ಇದ್ದು, ಭೇಟಿ ನೀಡಿದವರಿಗೆ ಯಾವ ರೀತಿಯ ಚಿಕಿತ್ಸೆಯ ಅವಶ್ಯಕತೆ ಇದೆ. ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ಸಾಕೇ? ಆಸ್ಪತ್ರೆಗೆ ದಾಖಲಾಗಬೇಕೇ? ಆಕ್ಸಿಜನ್ ಬೆಡ್ ಅವಶ್ಯಕತೆ ಇದೆಯೆ? ಎಂಬೆಲ್ಲ ಮಾಹಿತಿಯನ್ನು ನೀಡಿ ಸೂಕ್ತ ಸಲಹೆಗಳನ್ನು ನೀಡುತ್ತಾರೆ. ನನ್ನ ಯಶವಂತಪುರ ಕ್ಷೇತ್ರದಲ್ಲಿ ಏಳೂವರೆ ಸಾವಿರ ಜನರಿಗೆ ಕೋವಿಡ್ ಸೋಂಕು ಬಂದಿದ್ದು, ಈಗಾಗಲೇ ಆರೂವರೆ ಸಾವಿರ ಮಂದಿ ಗುಣಮುಖರಾಗಿದ್ದಾರೆ. ಇನ್ನೂ ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಪಾಸಿಟಿವ್ ಬಂದರೆ ಕೋವಿಡ್ ಕೇರ್ ಸೆಂಟರ್ ಗೆ ಸೇರಿ: ಕೋವಿಡ್ ಸೋಂಕಿಗೆ ಒಳಪಟ್ಟವರು ಮನೆಯಲ್ಲಿರಬೇಡಿ ಎಂದು ಸರ್ಕಾರ ಸಹ ಇತ್ತೀಚೆಗೆ ಆದೇಶ ಹೊರಡಿಸಿದೆ. ಅಂದರೆ, ಒಬ್ಬರಿಗೆ ಬಂದರೆ ಮನೆಯವರಿಗೆಲ್ಲ ಹರಡಬಹುದಾಗಿದೆ. ಈ ಕಾರಣಕ್ಕಾಗಿ ಕೇರ್ ಸೆಂಟರ್ ಗಳಿಗೆ ದಾಖಲಾಗಿ ಎಂದು ಹೇಳಿದೆ. ಹಲವಾರು ಕಡೆ ಬೆಡ್ ಗಳು ಖಾಲಿ ಇದೆ. ಯಾರೂ ಭಯಪಡುವುದು ಬೇಡ. ಸೋಂಕಿನ ಲಕ್ಷಣಗಳಿದ್ದರೆ ಚಿಕಿತ್ಸೆ ಪಡೆದು ಟೆಸ್ಟ್ ಮಾಡಿಸಿಕೊಳ್ಳಬೇಕು. ಕೆಲವರು ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದು, ಯಾರೂ ಸಹ ಆತಂಕಗೊಳ್ಳುವುದು ಬೇಡ ಎಂದು ನುಡಿದರು.
ಎಲ್ಲರೂ ವ್ಯಾಕ್ಸಿನೇಶನ್ ಹಾಕಿಸಿಕೊಳ್ಳಿ: 17 ಗ್ರಾಮ ಪಂಚಾಯಿತಿಯ ಪ್ರತಿ ಹಳ್ಳಿಗಳಲ್ಲಿಯೂ ವ್ಯಾಕ್ಸಿನೇಶನ್ ಮಾಡಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಾಗಿದೆ. ಈ ಬಗ್ಗೆ ಡಿಎಚ್ ಒ ಅವರಿಗೂ ಮನವಿ ಮಾಡಿ, ಪ್ರತಿ ಹಳ್ಳಿಗಳ ಆಧಾರದ ಮೇಲೆ ವ್ಯಾಕ್ಸಿನೇಶನ್ ಅನ್ನು ಹಂಚಿಕೆ ಮಾಡಿ, ಕೊಡಿಸಲಾಗುತ್ತಿದೆ. ಜೊತೆಗೆ ವ್ಯಾಕ್ಸಿನೇಶನ್ ಯಾರಿಗೆ, ಎಷ್ಟು ಜನಕ್ಕೆ ಎಂಬುದನ್ನು ಮೊದಲೇ ಬಹಿರಂಗಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಮಾಗಡಿ ರಸ್ತೆಯ ತಾವರೆಕೆರೆ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಪರಿಶಿಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷರಾದ ಕಟೀಲ್‍ರವರು, ಇದರ ಜೊತೆಗೆ ಕೋವಿಡ್ ವಾರಿಯರ್ಸ್ ಗಳಿಗೆ ಕಿಟ್ ಗಳನ್ನು ಕೊಡುವುದು, ಚೆನ್ನೇನಹಳ್ಳಿ ಮತ್ತಿತರ ಕಡೆ ತೆರೆಯಲಾದ ಕೋವಿಡ್ ಕೇರ್ ಸೆಂಟರ್, ಟ್ರಯಾಜ್ ಸೆಂಟರ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ವೀಕ್ಷಣೆ ಮಾಡಿದ್ದು, ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇದನ್ನು ಓದಿ: ಸಿ.ಟಿ.ರವಿ-ನಳಿನ್ ಕುಮಾರ್ ಕಟೀಲ್ 45 ನಿಮಿಷ ಗೌಪ್ಯ ಮಾತುಕತೆ