– ಕೊರೊನಾ ಹೊರಗೆ ಬರಲೆಂದು ಗಡಿಯಲ್ಲಿ ಕಾಯುವುದಲ್ಲ, ಶತ್ರು ಇರುವೆಡೆ ನುಗ್ಗಿ ಹೊಡೆಯಬೇಕು
ಮುಂಬೈ: ಕೊರೊನಾ ವೀರುದ್ಧ ಯುದ್ಧೋಪಾದಿಯಲ್ಲಿ ಹೋರಾಡಬೇಕಿದೆ ಎಂಬುದನ್ನು ಕೋರ್ಟ್ ತಿಳಿಸಿದ್ದು, ಗಡಿಯಲ್ಲಿ ನಿಂತು ಶತ್ರುವಿಗಾಗಿ ಕಾಯಬಾರದು. ಬದಲಿಗೆ ಶತ್ರು ಇರುವ ಪ್ರದೇಶಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು ಎಂದು ಬಾಂಬೆ ಹೈ ಕೋರ್ಟ್ ಕೇಂದ್ರ ಸರ್ಕಾರವನ್ನು ಎಚ್ಚರಿಸಿದೆ.
ಮುಖ್ಯನ್ಯಾಯಾಧೀಶರಾದ ದೀಪಂಕರ್ ದತ್ತ ಹಾಗೂ ಜಿ.ಎಸ್.ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಇದೀಗ ಸಮಾಜದ ಅತೀ ದೊಡ್ಡ ವೈರಿ ಕೊರೊನಾ ವೈರಸ್, ಹೀಗಾಗಿ ಕೊರೊನಾ ವೈರಸ್ ಹೊರಗಡೆ ಬರಲಿ ಎಂದು ಬಾರ್ಡರ್‍ನಲ್ಲಿ ನಿಂತು ಕಾಯುವುದಕ್ಕಿಂತ ಇದರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕಿದೆ ಎಂದು ಹೇಳಿದೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ ವರನೇ ಬೇಕೆಂದ ವಧು – ಶಶಿ ತರೂರ್ ತಬ್ಬಿಬ್ಬು
ಕೊರೊನಾ ವೈರಸ್ ನಮ್ಮ ಅತಿ ದೊಡ್ಡ ಶತ್ರು, ನಾವು ಅದನ್ನು ಹೊಡೆದುರುಳಿಸಬೇಕಾಗಿದೆ. ಶತ್ರು ಕೆಲವು ಪ್ರದೇಶಗಳಲ್ಲಿ ಹಾಗೂ ಹೊರ ಬರಲು ಸಾಧ್ಯವಾಗದ ಕೆಲವು ಜನರಲ್ಲಿ ವಾಸಿಸುತ್ತಿದ್ದಾನೆ. ಸರ್ಕಾರದ ದಾಳಿ ಸರ್ಜಿಕಲ್ ಸ್ಟ್ರೈಕ್ ರೀತಿ ಇರಬೇಕು. ಆದರೆ ನೀವು ಗಡಿಯಲ್ಲಿ ನಿಂತು ವೈರಸ್ ನಿಮ್ಮ ಬಳಿ ಬರಲೆಂದು ಕಾಯುತ್ತಿದ್ದೀರಿ. ನೀವು ಶತ್ರುವಿನ ಪ್ರದೇಶದೊಳಗೆ ನುಗ್ಗುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದತ್ತ ಹೇಳಿದ್ದಾರೆ.
ಸಾರ್ವಜನಿಕರ ಒಳಿತಿಗಾಗಿ ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಆದರೆ ವಿಳಂಬವಾಗಿರುವುದು ಹಲವು ಜೀವಗಳನ್ನು ಬಲಿ ಪಡೆದಿದೆ ಎಂದು ಕೋರ್ಟ್ ತಿಳಿಸಿದೆ.
ಮಂಗಳವಾರ ಕೇಂದ್ರ ಸರ್ಕಾರ ಈ ಕುರಿತು ಕೋರ್ಟ್ ಗೆ ಹೇಳಿಕೆ ನೀಡಿದ್ದು, ಪ್ರಸ್ತುತ ಡೋರ್-ಟು-ಡೋರ್ ಲಸಿಕಾಕರಣ ಸಾಧ್ಯವಿಲ್ಲ. ಆದರೆ ಮನೆಯ ಹತ್ತಿರ ಲಸಿಕಾ ಕೇಂದ್ರಗಳನ್ನು ತೆರೆಯಬಹುದು ಎಂದು ಉತ್ತರಿಸಿದೆ. ಹೀಗೆ ಹೇಳುತ್ತಿದ್ದಂತೆ ಬುಧವಾರ ಹೈ ಕೋರ್ಟ್ ದೇಶದಲ್ಲಿನ ಹಲವು ರಾಜ್ಯಗಳು ಹಾಗೂ ನಗರ ಪಾಲಿಕೆಗಳು ಡೋರ್-ಟು-ಡೋರ್ ಲಸಿಕೆಗೆ ಕ್ರಮ ಕೈಗೊಂಡಿರುವ ಕುರಿತು ಉದಾಹರಣೆ ನೀಡಿದ್ದು, ಕೇರಳ, ಜಮ್ಮು ಕಾಶ್ಮೀರ, ಬಿಹಾರ ಹಾಗೂ ಓಡಿಶಾ. ಅಲ್ಲದೆ ಮಹಾರಾಷ್ಟ್ರದ ವಸಾಯಿ-ವಿವರ್ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಡೋರ್-ಟು-ಡೋರ್ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದೆ.
ದೇಶದ ಇತರ ರಾಜ್ಯಗಳಲ್ಲಿ ಇದನ್ನು ಏಕೆ ಪ್ರೋತ್ಸಾಹಿಸಬಾರದು? ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳ ರೆಕ್ಕೆಗಳಿಗೆ ಕ್ಲಿಪ್ ಹಾಕಲು ಸಾಧ್ಯವಿಲ್ಲ. ಆದರೂ ಹಲವು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿವೆ ಎಂದು ಹೇಳಿದೆ.