ನೀವು ಎಂದಿಗೂ ನಮ್ಮ ಹೆಮ್ಮೆ – ಅನಿಲ್ ಕುಂಬ್ಳೆಗೆ ಕಿಚ್ಚ ವಿಶ್

Public TV
1 Min Read
anil kumble sudeep

ಬೆಂಗಳೂರು: ಭಾರತ ಕ್ರಿಕೆಟ್ ಕಂಡ ಅದ್ಭುತ ನಾಯಕ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಯವರ ಹುಟ್ಟುಹಬ್ಬಕ್ಕೆ ನಟ ಕಿಚ್ಚ ಸುದೀಪ್ ಅವರು ಶುಭಕೋರಿದ್ದಾರೆ.

ಟೆಸ್ಟ್ ಪಂದ್ಯವೊಂದರಲ್ಲಿ ಪಾಕಿಸ್ತಾನದ ವಿರುದ್ಧ 10 ವಿಕೆಟ್ ಪಡೆದು ಮಿಂಚಿದ್ದ ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆಯವರು ಇಂದು 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಸದ್ಯ ಐಪಿಎಲ್ ನಿಮಿತ್ತ ಯುಎಇಯಲ್ಲಿರುವ ಕುಂಬ್ಳೆಯವರಿಗೆ ಸಾವಿರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ.

ಅಂತೆಯೇ ಟ್ವಿಟ್ಟರ್ ಮೂಲಕ ಶುಭಕೋರಿರುವ ಸುದೀಪ್, ನೀವು ಮೈದಾನದಲ್ಲಿ ಹೀರೋ ಆಗಿದಕ್ಕೆ, ಅದು ನಿಮ್ಮನಿಂದು ಲೆಜೆಂಡ್ ಆಗಿ ಮಾಡಿದೆ ಅನಿಲ್ ಕುಂಬ್ಳೆ ಸರ್. ಆದರೆ ಎಲ್ಲ ಪರಿಸ್ಥಿತಿಯನ್ನು ನೀವು ನಿಭಾಯಿಸಿದ ರೀತಿ ನಿಮ್ಮನ್ನು ಗುರುತಿಸುವಂತೆ ಮಾಡಿದೆ. ಕೆಲ ಪರಿಸ್ಥಿತಿಯಲ್ಲಿ ನಿಮ್ಮ ಮಾತುಗಳು ನೀವು ಓರ್ವ ಜೆಂಟಲ್‍ಮ್ಯಾನ್ ಎಂಬುದನ್ನು ತೋರಿಸಿಕೊಟಿವೆ. ಅದೇ ನಮಗೆ ಸ್ಫೂರ್ತಿ. ನೀವು ಎಂದಿಗೂ ನಮ್ಮ ಹೆಮ್ಮೆ ಹುಟ್ಟುಹಬ್ಬದ ಶುಭಾಶಯಗಳು ಸರ್ ಎಂದು ಬರೆದುಕೊಂಡಿದ್ದಾರೆ.

ANIL KUMBLE a

1990 ರಲ್ಲಿ ಭಾರತೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಅನಿಲ್ ಕುಂಬ್ಳೆಯವರು ಸುಮಾರು 18 ವರ್ಷಗಳ ಕಾಲ ಭಾರತಕ್ಕಾಗಿ ಕ್ರಿಕೆಟ್ ಆಡಿದರು. ಭಾರತದ ಪರ 132 ಟೆಸ್ಟ್ ಮ್ಯಾಚ್ ಆಡಿರುವ ಕುಂಬ್ಳೆ ಬರೋಬ್ಬರಿ 619 ವಿಕೆಟ್ ಪಡೆದುಕೊಂಡಿದ್ದಾರೆ. ಜೊತೆಗೆ 1999 ರಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ ಕಿತ್ತು ದಾಖಲೆ ಬರೆದಿದ್ದಾರೆ. ಭಾರತಕ್ಕಾಗಿ 271 ಏಕದಿನ ಪಂದ್ಯಗಳನ್ನು ಆಡಿರುವ ಕುಂಬ್ಳೆಯವರು 337 ವಿಕೆಟ್ ಕಿತ್ತು ಮಿಂಚಿದ್ದಾರೆ.

ANIL KUMBLE

ಭಾರತ ಕ್ರಿಕೆಟಿನಲ್ಲಿ ಜಂಬೋ ಎಂದೆ ಹೆಸರು ಮಾಡಿದ್ದ, ತನ್ನ ಲೆಗ್ ಸ್ಪಿನ್ ಮೂಲಕ ಎದುರಾಳಿಗಳನ್ನು ಕಾಡಿದ್ದ ಕುಂಬ್ಳೆ, 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು. ಸದ್ಯ ಐಪಿಎಲ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆ ಭಾರತ ತಂಡಕ್ಕೂ ಕೂಡ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಕಮೆಂಟೆಟರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಕ್ರಿಕೆಟಿಗೆ ನಿವೃತ್ತಿ ಘೋಷಿಸದ ನಂತರ ಕ್ರಿಕೆಟಿನಲ್ಲೇ ಸಕ್ರಿಯವಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *