ಉಡುಪಿ: ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಕಳೆದೆರಡು ದಿನಗಳಿಂದ 100 ಮಿಲಿಮೀಟರ್ ಗಿಂತ ಹೆಚ್ಚು ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ನದಿಗಳು ಭರ್ತಿಯಾಗಿ ಹರಿಯುತ್ತಿದೆ.
ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹುಟ್ಟಿ ಕರಾವಳಿಯತ್ತ ಹರಿಯುವ ಸೀತಾನದಿ ಕೂಡ ತುಂಬಿ ಹರಿಯುತ್ತಿದೆ. ಹೆಬ್ರಿ ಮೂಲಕ ಹರಿದು ಬ್ರಹ್ಮಾವರ ತಾಲೂಕು ಸೇರುವ ಸಂದರ್ಭ ಹೊಳೆಗಳೆಲ್ಲ ಸೇರಿಕೊಳ್ಳುತ್ತವೆ. ನೀಲಾವರ ಸಮೀಪ ಭರ್ತಿಯಾಗಿ ಹರಿಯುತ್ತಿರುವ ಸೀತಾನದಿ, ನೀಲಾವರ ಚೆಕ್ ಡ್ಯಾಂ ಸಮೀಪ ರಭಸವಾಗಿ ಹರಿಯುತ್ತಿದ್ದಾಳೆ. ನೀಲಾವರ ಮಟಪಾಡಿ, ನಂದನ್ ಕುದ್ರು ಆನಹಳ್ಳಿ, ಬಾರ್ಕೂರು ಮುಂತಾದ ಗ್ರಾಮಗಳ ಬಳಿ ಗದ್ದೆ ತೆಂಗಿನ ತೋಟ ಅಡಿಕೆ ತೋಟಗಳಿಗೆ ಮಳೆ ನೀರು ನುಗ್ಗಿದೆ.
ಪಶ್ಚಿಮಘಟ್ಟದಲ್ಲಿ ನಿರಂತರ ಮಳೆ ಬೀಳುತ್ತಿರುವುದರಿಂದ ಕಳೆದೆರಡು ದಿನಗಳಿಂದ ನದಿ ಯಥಾ ಸ್ಥಿತಿಯಲ್ಲಿದೆ. ನದಿ ಪಾತ್ರಗಳಲ್ಲಿ ಮನೆ ಕಟ್ಟಿಕೊಂಡಿರುವವರು ಬಹಳ ಮುನ್ನೆಚ್ಚರಿಕೆಯಿಂದ ಇರಬೇಕು. ನದಿಯ ಮಟ್ಟ ಹೆಚ್ಚಾಗುವ ಸಂದರ್ಭ ಬಂದರೆ ಜಿಲ್ಲಾಡಳಿತ ತಹಶೀಲ್ದಾರ್ ಕಚೇರಿ ಸ್ಥಳೀಯ ಪಂಚಾಯ್ತಿಗಳಿಗೆ ಮಾಹಿತಿ ಕೊಡಬೇಕು ಎಂದು ಸೂಚಿಸಲಾಗಿದೆ.