ನೀರೆಂದು ಸ್ಯಾನಿಟೈಸರ್ ಕುಡಿದ ಪಾಲಿಕೆ ಉಪ ಕಮಿಷನರ್ – ವೀಡಿಯೋ ವೈರಲ್

Public TV
2 Min Read
BMC 3

ಮುಂಬೈ: ಮಹಾಮಾರಿ ಕೊರೊನಾ ವೈರಸ್ ತಗುಲುವುದನ್ನು ತಡೆಗಟ್ಟುವ ಸಲುವಾಗಿ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ. ಆದರೆ ಇತ್ತೀಚೆಗೆ ಮಕ್ಕಳಿಗೆ ಪೋಲಿಯೋ ಡ್ರಾಪ್ಸ್ ಬದಲು ಈ ಸ್ಯಾನಿಟೈಸರನ್ನು ಹಾಕಿ ಎಡವಟ್ಟು ಮಾಡಲಾಗಿತ್ತು. ಇದೀಗ ಅದೇ ಸ್ಯಾನಿಟೈಸರ್ ನಿಂದ ಮತ್ತೊಂದು ಎಡವಟ್ಟಾದ ಘಟನೆ ಬೆಳಕಿಗೆ ಬಂದಿದೆ.

ಹೌದು. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ) ಉಪ ಕಮಿಷನರ್ ನೀರೆಂದು ಸ್ಯಾನಿಟೈಸರ್ ಕುಡಿದಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಂದು ನಾಗರಿಕ ಸಂಸ್ಥೆಯ ಶಿಕ್ಷಣ ಬಜೆಟ್ ಮಂಡಿಸುವಾಗ ಉಪ ಕಮಿಷನರ್ ರಮೇಶ್ ಪವಾರ್ ಅವರು ನೀರಿನ ಬದಲು ಸ್ಯಾನಿಟೈಸರ್ ಕುಡಿದಿದ್ದಾರೆ.

BMC 1

ಸ್ಯಾನಿಟೈಸರ್ ಪಕ್ಕದಲ್ಲಿಯೇ ನೀರಿನ ಬಾಟ್ಲಿಯನ್ನು ಇರಿಸಲಾಗಿತ್ತು. ಬಜೆಟ್ ಮಂಡಿಸುವ ಮೊದಲು ರಮೇಶ್ ಪವಾರ್ ಸ್ವಲ್ಪ ನೀರು ಕುಡಿಯಲು ನಿರ್ಧರಿಸಿದರು. ಹಾಗೆಯೇ ಅವರು ಸ್ಯಾನಿಟೈಸರ್ ಬಾಟ್ಲಿ ತೆಗೆದುಕೊಂಡು ಕುಡಿದಿದ್ದಾರೆ. ತಾನು ಕುಡಿಯುತ್ತಿರುವುದು ಸ್ಯಾನಿಟೈಸರ್ ಎಂದು ಗೊತ್ತಾದ ತಕ್ಷಣವೇ ಪವಾರ್ ಅವರು ಉಗುಳಿದ್ದಾರೆ.

ಘಟನೆಯ ನಂತರ ರಮೇಶ್ ಪವಾರ್ ಸಭಾಂಗಣದಿಂದ ಹೊರಗೆ ಹೋಗಿ ಸ್ವಲ್ಪ ವಿರಾಮ ತೆಗೆದುಕೊಂಡು ನಂತರ ಮರಳಿದರು. ಅಲ್ಲದೆ ಬಜೆಟ್ ಮಂಡನೆ ಮುಂದುವರಿಯಿತು. ಇನ್ನು ಆರೋಗ್ಯ ಸಮಸ್ಯೆಗಳನ್ನು ಎದುರಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

BMC

ಘಟನೆಯ ಸಂಪೂರ್ಣ ವೀಡಿಯೋವನ್ನು ಅಲ್ಲೇ ಇದ್ದ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸುಮಾರು 5,000ಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಅಲ್ಲದೆ ಹಲವಾರು ಲೈಕ್‍ಗಳು ಮತ್ತು ರಿಟ್ವೀಟ್‍ಗಳು ಬಂದಿವೆ. ನೆಟ್ಟಿಗರೊಬ್ಬರು ಬಜೆಟ್ ಮಂಡಿಸುವ ಮೊದಲು ಆತಂಕ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಎಂಸಿ ಅಧಿಕಾರಿಗಳು, ನೀರಿನ ಬಾಟಲಿಗಳು ಮತ್ತು ಸ್ಯಾನಿಟೈಸರ್ ಎರಡನ್ನೂ ಮೇಜಿನ ಮೇಲೆ ಇರಿಸಲಾಗಿದ್ದು ಒಂದೇ ರೀತಿ ಕಾಣುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ ಘಟನೆಯ ನಂತರ ಸ್ಯಾನಿಟೈಸರ್ ಬಾಟ್ಲಿಗಳನ್ನು ತೆಗೆದುಹಾಕಲಾಗಿದೆ. ಯಾಕಂದರೆ ನೀರಿನ ಬಾಟಲಿಗಳು ಮತ್ತು ಸ್ಯಾನಿಟೈಸರ್ ಬಾಟ್ಲಿಗಳು ಒಂದೇ ರೀತಿ ಕಾಣುತ್ತಿದ್ದವು. ಆದ್ದರಿಂದ ಮುಂದೆ ಇಂತಹ ತಪ್ಪು ಮರುಕಳಿಸಬಾರದೆಂದು ನಾವು ಸ್ಯಾನಿಟೈಸರ್ ಬಾಟ್ಲಿಗಳನ್ನು ಟೇಬಲ್‍ನಿಂದ ತೆಗೆದುಹಾಕಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *